
ವಾಷಿಂಗ್ಟನ್: ಅಮೆರಿಕದ ಸಲಿಂಗಕಾಮಿ ಹಕ್ಕುಗಳ ಹೋರಾಟಗಾರರಿಗೆ ಶುಕ್ರವಾರ ಐತಿಹಾಸಿಕ ಗೆಲವು. ಅಮೆರಿಕದಲ್ಲಿ ಸಲಿಂಗಕಾಮಿ ವಿವಾಹ ಕಾನೂನುಬದ್ಧ ಎಂದು ಹೇಳಿ ಅಲ್ಲಿನ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
'ನಮ್ಮ ಸಂವಿಧಾನವು ಸಲಿಂಗಕಾಮಿ ದಂಪತಿಗಳಿಗೆ ಮದುವೆಯಾಗುವ ಅಧಿಕಾರವನ್ನು ನೀಡಿದೆ. ಕಾನೂನಿನಡಿ ಎಲ್ಲರೂ ಸಮಾನ ಎಂದು ಸಂವಿಧಾನ ಹೇಳುತ್ತದೆ. ಯಾವುದೇ ರಾಜ್ಯಕ್ಕೂ ಸಲಿಂಗಿಗಳ ವಿವಾಹ ನಿಷೇಧಿಸುವ ಅಧಿಕಾರವಿಲ್ಲ. ಹಾಗಾಗಿ ಇನ್ನು ಅಮೆರಿಕದ ಎಲ್ಲ 50 ರಾಜ್ಯಗಳಲ್ಲೂ ಸಲಿಂಗ ವಿವಾಹ ಕಾನೂನುಬದ್ಧವಾಗಲಿದೆ' ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
1967ರ ಲವಿಂಗ್ ವರ್ಸಸ್ ವರ್ಜೀನಿಯಾ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಇದಾಗಿದೆ. ಅಂತರ್ ಜನಾಂಗೀಯ ವಿವಾಹಕ್ಕೆ ರಾಜ್ಯಗಳು ಹೇರಿದ್ದ ನಿಷೇಧವನ್ನು ಅಂದು ಕೋರ್ಟ್ ವಜಾ ಮಾಡಿತ್ತು. ಇತ್ತೀಚೆಗೆ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಅಭಿಪ್ರಾಯವೇ ಕೇಳಿಬಂದಿತ್ತು. ಅದರಲ್ಲೂ ಯುವ ಅಮೆರಿಕನ್ನರು ಇಂತಹ ಸಂಬಂಧವನ್ನು ಸ್ವಾಗತಿಸಿದ್ದರು.
Advertisement