
ನವದೆಹಲಿ: ಅಮೇರಿಕಾದಲ್ಲಿ 2008 ರಲ್ಲಿ ಉದ್ಭವಿಸಿದ ಸಬ ಪ್ರೈಮ್ ಬಿಕ್ಕಟ್ಟು ಇಡಿ ಜಗತ್ತನ್ನು ವ್ಯಾಪಿಸಿತು. ಇದರಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಇರದ ನಡುವೆ ಗ್ರೀಸ್ ಮತ್ತಿತರ ದೇಶಗಳು ಮತ್ತಷ್ಟು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿವೆ. ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಚೀನಾ ಮತ್ತು ಭಾರತಗಳಲ್ಲೂ ಆರ್ಥಿಕ ಅಭಿವೃದ್ಧಿ ನಿರೀಕ್ಷೆಗಳಿಗೆ ಅನುಸಾರವಾಗಿ ನಡೆಯುತ್ತಿಲ್ಲ. ಜಾಗತಿಕ ಆರ್ಥಿಕ ವಿಶ್ಲೇಷಣಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾರತದ ಗ್ರಾಮೀಣ ಆರ್ಥಿಕತೆ ಪ್ರಸಕ್ತ ಹಣಕಾಸು ಸಾಲಿನಲ್ಲಿಯೂ ಹಿನ್ನಡೆ ಕಾಣಲಿದೆ ಎಂದು ಜಾಗತಿಕ ಆರ್ಥಿಕ ವಿಶ್ಲೇಷಣಾ ಸಮಿತಿ ಮೂಡೀಸ್ ಹೇಳಿದೆ. ಮುಂಗಾರು ಮಳೆ ಹಿನ್ನಡೆ ಕಂಡಲ್ಲಿ ಈ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿರಲಿದೆ ಎಂದಿದೆ.
ಭಾರತದ ಗ್ರಾಮೀಣ ಆರ್ಥಿಕತೆ ಹಿನ್ನಡೆ ಕಾಣುವುದರಿಂದ ಖರೀದಿ ಶಕ್ತಿಯನ್ನು ಕುಠಿತಗೊಳಿಸಲಿದೆ. ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿನ ಸುಸ್ತಿ ಸಾಲವನ್ನು ಹೆಚ್ಚಿಸಲಿದೆ. ಇದು ನೇರವಾಗಿ ದೇಶದ ಸಾಲ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಮತ್ತು ಹಿರಿಯ ವಿಶ್ಲೇಷಕರಾದ ರಾಹುಲ್ ಘೋಷ್ ಹೇಳಿದ್ದಾರೆ.
ದೇಶದ ಗ್ರಾಮೀಣ ಆದಾಯ 2011 ರಲ್ಲಿ ಈ ಪ್ರಮಾಣ ಶೇ.20 ರಷ್ಟಿದ್ದದ್ದು ಪ್ರಸಕ್ತ ಸಾಲಿನಲ್ಲಿ ಒಂದಂಕಿಗೆ ಕುಸಿದೆ. ಕೇಂದ್ರ ಸರ್ಕಾರದ ಬಿಗಿ ಹಣಕಾಸು ನೀತಿಗಳೂ ಗ್ರಾಮೀಣ ಆದಾಯ ಕಡಿಮೆಯಾಗಲು ಒಂದು ಕಾರಣವಾಗಿದೆ ಎಂದಿರುವ ಸಂಸ್ಥೆ ಮುಂದಿನ ತ್ರೈಮಾಸಿಕಗಳಲ್ಲಿ ಇದು ಬದಲಾಗುವ ಸಂಭವನೀಯತೆ ಇಲ್ಲ ಎಂತಲೂ ಹೇಳಿದೆ.
ದೇಶದ ಸಾರ್ವಭೌಮ ನಿಧಿ ಮತ್ತು ಬ್ಯಾಂಕ್ ರೇಟಿಂಗ್ ಸಹ ನೇತ್ಯಾತ್ಮಕ ವಲಯದಲ್ಲಿದೆ ಎಂದಿರುವ ಸಂಸ್ಥೆ, ಮೋದಿ ಸರ್ಕಾರ ಸುಧಾರಣೆ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿರುವ ವೇಗದ ಕುರಿತು ಉದ್ಯಮವಲಯದಲ್ಲಿ ಸ್ವಲ್ಪ ಅಸಮಾಧಾನವಿದೆ ಎಂದಿದೆ. ಅದರೂ ಭಾರತದ ಆರ್ಥಿಕತೆ ಕುರಿತು ಹೂಡಿಕೆದಾರರಲ್ಲಿನ ಒಟ್ಟಾರೆ ಅಭಿಪ್ರಾಯ ಅಶಾದಾಯಕವಾಗಿದ್ದು ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ಶೇ.7.5 ರ ಅಜುಬಾಜಿನಲ್ಲಿರಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಇನ್ ಸೈಡ್ ಇಂಡಿಯಾ ವರದಿಯಲ್ಲಿ ಹೇಳಿದೆ.
ಜಿ 20 ದೇಶಗಳ ಪೈಕಿ ಭಾರತಕ್ಕೆ ಮೊದಲ ಸ್ಥಾನ ನೀಡಿದ್ದು ಸಾರ್ವಭೌಮನಿಧಿ ರೇಟಿಂಗ್ ಬಿಎಎ 3 ನೀಡಿ ಸಕಾರಾತ್ಮಕ ಮುನ್ನೋಟ ನೀಡಲಾಗಿದೆ ಬಿಎಎ 3 ಕನಿಷ್ಠ ಹೂಡಿಕೆ ದರ್ಜೆಯಾಗಿದೆ. ಅದರೂ ಮುನ್ನೋಟ ಸಕಾರಾತ್ಮಕವಾಗಿರುವುದು ರೇಟಿಂಗ್ ಮತ್ತಷ್ಟು ಹೆಚ್ಚಿಸುವ ಅವಕಾಶವನ್ನು ಮುಕ್ತವಾಗಿಟ್ಟಿದೆ.
ಕೆಲವು ನೀತಿಗಳು ದೇಶದ ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿದ್ದರೂ ಅಭಿವೃದ್ಧಿ ವೇಗವನ್ನು ಹೆಚ್ಚಳದ ಮೇಲೆ ನೇರ ಪರಿಣಾಮ ಬೀರುವಂತಹ ಸುಧಾರಣೆಗಳನ್ನು ಕೈಗೊಂಡಾಗ ಮಾತ್ರ ಭವಿಷ್ಯದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಕೆಲವರು ಹೇಳಿದ್ದಾರೆ.
Advertisement