
ಶ್ರೀನಗರ: ಶಾಂತಿಯುತ ಮತದಾನದ ಶ್ರೇಯ ಪಾಕಿಸ್ತಾನಕ್ಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಈಗ ಹೊಸ ವಿವಾದ ಸೃಷ್ಟಿಸಿದ್ದಾರೆ.
ರಾಜ್ಯದ ಜೈಲಲ್ಲಿರುವ ಕ್ರಿಮಿನಲ್ ಆರೋಪಗಳಿಲ್ಲದ ರಾಜಕೀಯ ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಈ ನಡೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಆದರೆ, ಸರ್ಕಾರ ಮಾತ್ರ ರಾಜಕೀಯ ಕೈದಿಗಳನ್ನು ಬಿಡುಗಡೆ ಕ್ರಮವನ್ನು ಸಮರ್ಥಿಸಿಕೊಂಡಿದೆ. ಇದರ ಮೂಲಕ ರಾಜ್ಯದ ರಾಜಕೀಯ ಪಕ್ಷಗಳಿಗೆ ಧನಾತ್ಮಕ ಸಂದೇಶ ರವಾನಿಸಿದಂತಾಗಲಿದೆ ಎಂದು ಹೇಳಿದೆ.
ಪ್ರತ್ಯೇಕವಾದಿಗಳ ಆಗ್ರಹ:
ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಸರ್ಕಾರದ ಕ್ರಮವನ್ನು ಹುರ್ರಿಯತ್ ಕಾನ್ಫರೆನ್ಸ್ ವ್ಯಂಗ್ಯ ಮಾಡಿದೆ. ಸರ್ಕಾರ ಕೇವಲ 10ರಿಂದ 12 ಮುಖಂಡರನ್ನಷ್ಟೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದೆಲ್ಲ ರಾಜಕೀಯ ಉದ್ದೇಶವಿಟ್ಟುಕೊಂಡು ಮಾಡುತ್ತಿರುವ ಕಾರ್ಯ ಎಂದು ಹುರಿಯತ್ ಕಾನ್ಫರೆನ್ಸ್ ನ ವಕ್ತಾರ ಅಯಾಜ್ ಅಕ್ಬರ್ ಆರೋಪಿಸಿದ್ದಾರೆ.
ಇದರ ಬದಲು ಜೈಲಲ್ಲಿರುವ ಮಾಜಿ ಉಗ್ರರು ಸೇರಿ 500ಕ್ಕೂ ಹೆಚ್ಚು ಪ್ರತ್ಯೇಕವಾದಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೈದಿಗಳನ್ನು ವಿಚಾರಣೆ ಇಲ್ಲದೆ ವರ್ಷಗಟ್ಟಲೆ ಜೈಲಿನಲ್ಲಿಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಕೆಲವರು ಬಲವಂತವಾಗಿ ತಪ್ಪಿಸಿಕೊಳ್ಳುವಂತೆ ಮಾಡಲಾಗಿದೆ ಎಂದು ಅಕ್ಬರ್ ದೂರಿದ್ದಾರೆ.
Advertisement