
ಸಿಡ್ನಿ: ಬೆಂಗಳೂರು ಮೂಲದ ಮಹಿಳಾ ಐಟಿ ಕನ್ಸಲ್ಟೆಂಟ್ ರೊಬ್ಬರನ್ನು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪ್ರಭಾ ಅರುಣ್ ಕುಮಾರ್ ಎಂಬ 41 ವರ್ಷದ ವಯಸ್ಸಿನ ಭಾರತೀಯ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ಸಿಡ್ನಿಯಲ್ಲಿರುವ ಅವರ ಮನೆ ಸಮೀಪವೇ ಶನಿವಾರ ರಾತ್ರಿ ಭೀಕರವಾಗಿ ಇರಿದು ಕೊಂದಿದ್ದಾರೆ.
ಪಶ್ಚಿಮ ಸಿಡ್ನಿಯಲ್ಲಿ ನಡೆದಿರುವ ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಪ್ರಭಾ ಅರುಣ್ ಕುಮಾರ್ ಅವರು ಮನೆಯ ಸಮೀಪವಿರುವ ಪರಮಟ್ಟಾ ಪಾರ್ಕಿಗೆ ತೆರಳಿದ್ದರು. ಈ ವೇಳೆ ತಮ್ಮ ಪತಿ ಅರುಣ್ ಅವರ ಜೊತೆ ಮಾತನಾಡುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು ತಮ್ಮ ಪತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಪ್ರಭಾ ಅವರು 'ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ' ಎಂದು ಸಂಶಯಗೊಂಡು ತಮ್ಮ ಪತಿಗೆ ಮಾಹಿತಿ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲೇ ದುಷ್ಕರ್ಮಿಗಳು ಪ್ರಭಾ ಅವರ ಮೇಲೆ ದಾಳಿ ನಡೆಸಿದ್ದು, ಭೀಕರವಾಗಿ ಇರಿದು ಕೊಂದು ಹಾಕಿದ್ದಾರೆ.
'ಪ್ರಭಾ ಅವರು ಕೆಲಸ ಮುಗಿಸಿ ಮನೆಗೆ ಬರುವಾಗ ಈ ಘಟನೆ ನಡೆದಿದ್ದು ಪಾರ್ಕ್ ಸಮೀಪದ ಸಿಸಿಟಿವಿ ದೃಶ್ಯವಾಳಿಯನ್ನು ಪರಿಶೀಲಿಸಲಾಗುತ್ತಿದೆ. ಪ್ರಭಾ ಅವರ ಮೊಬೈಲ್ ಸಂದೇಶ ಹಾಗೂ ಕಾಲ್ ರೆಕಾರ್ಡ್ ಪರೀಕ್ಷೆ ಮಾಡಲಾಗುತ್ತಿದೆ.
ಮೃತ ಪ್ರಭಾ ಅವರ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದು, ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಿಡ್ನಿ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಕಾಲೇಜಿನಿಂದ ಬಿ.ಇ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದ ಪ್ರಭಾ ಅವರು, ಬೆಂಗಳೂರಿನ ಬಸವೇಶ್ವರ ನಗರ ಮೂಲದ ಪ್ರಭಾ ಅರುಣ್ ಕುಮಾರ್ ಕಳೆದ 4 ವರ್ಷಗಳಿಂದ ಸಿಡ್ನಿಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾಯುವ ಮುನ್ನ ನನಗೆ ಯಾರೋ ಇರಿದಿದ್ದಾರೆ ಎಂದು ಪತಿಗೆ ಪ್ರಭಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಪತಿ ಅರುಣ್ ಕೂಡಲೇ ಸಿಡ್ನಿಯತ್ತ ಪ್ರಯಾಣ ಬೆಳೆಸಿದ್ದು, ಭಾರತೀಯ ಧೂತವಾಸದೊಂದಿಗೆ ಅರುಣ್ ಅವರ ಕುಟುಂಬ ಸಂಪರ್ಕದಲ್ಲಿದ್ದಾರೆ. ಅಲ್ಲದೆ ಪತ್ನಿಯ ಮೃತ ದೇಹವನ್ನು ಭಾರತಕ್ಕೆ ತರಲು ಪತಿ ಅರುಣ್ ಕುಮಾರ್ ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement