

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ ಹಣಕಾಸು ನೆರವು ಕೋರಿದ್ದಾರೆ.
ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ನಂತರ ಇದೆ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳಕ್ಕೆ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಮೋದಿ ಕೇಂದ್ರದ ನೆರವಿನ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಆದರೆ, ಕಲ್ಲಿದ್ದಲು ಹರಾಜು ಮತ್ತು ಗಂಗಾ ಸ್ವಚ್ಛತಾ ಅಭಿಯಾನದಿಂದ ರಾಜ್ಯಕ್ಕೆ ಅನಕೂಲವಾಗಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಪಶ್ಚಿಮ ಬಂಗಾಳ ಗರಿಷ್ಠ ಸಾಲದಿಂದ ಬಳಲುತ್ತಿದ್ದು, ಹಣಕಾಸು ನೆರವು ನೀಡುವಂತೆ ಕೇಳಿಕೊಂಡಿದ್ದೇನೆ. ಪ್ರಧಾನಿ ಅವರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಎನ್‌ಡಿಎ ಸರ್ಕಾರ ವಿವಾದಾತ್ಮಕ ಭೂಸ್ವಾಧೀನ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆದುಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲೇ ಮಮತಾ ಬ್ಯಾನರ್ಜಿ ಅವರು ಮೋದಿ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.