
ನವದೆಹಲಿ: ಭೂ ಸ್ವಾಧೀನ ಕಾಯ್ದೆಯಲ್ಲಿ ತಿದ್ದುಪಡಿಯಲ್ಲಿ ತೊಡಕುಗಳು ಕಂಡುಬಂದಿದ್ದರೆ, ವಿರೋಧ ಪಕ್ಷಗಳು ಮುಕ್ತವಾಗಿ ಸಲಹೆ ನೀಡಬಹುದು ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಸೋಮವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಕುರಿತಂತೆ ಇಂದು ನವದೆಹಲಿಯಲ್ಲಿ ಮಾತನಾಡಿರುವ ರಾಧಾ ಮೋಹನ್ ಸಿಂಗ್ ಅವರು, ಸರ್ಕಾರ ಹಳ್ಳಿ, ಬಡಜನರು ಹಾಗೂ ರೈತರ ಅಭಿವೃದ್ಧಿಗಾಗಿ ಇದೆ. ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯು ರೈತರ ಪರವಾಗಿದೆ. ರೈತರಿಗಾಗಿ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳ ಕುರಿತಂತೆ ಕೆಲಸ ಹಾಗೂ ಯೋಜನೆಗಳು ರೂಪಿಸುತ್ತಿದೆ. ಕಾಯ್ದೆಯು ರೈತರ ವಿರುದ್ಧವಾಗಿದೆ ಎಂದು ವಿಪಕ್ಷಗಳಿಗೆ ಎನಿಸಿದರೆ ಅಥವಾ ಕಾಯ್ದೆಯಲ್ಲಿ ತೊಡಕುಗಳು ಕಂಡುಬಂದಿದ್ದರೆ ಮುಕ್ತವಾಗಿ ತಮ್ಮ ಸಲಹೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.
ಭೂಸ್ವಾಧೀನ ಸುಗ್ರೀವಾಜ್ಞೆ ಕಾಯ್ದೆಯನ್ನು ಈ ಹಿಂದೆ 2013ರಲ್ಲಿ ಅಸ್ತಿತ್ವದಲ್ಲಿದ್ದ ಯುಪಿಎ ಸರ್ಕಾರ ತಿದ್ದುಪಡಿ ಮಾಡಿತ್ತು. ಈ ಕಾಯ್ದೆಯನ್ನೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಾಮಾಜಿಕ ಆರ್ಥಿಕ ತೆರಿಗೆ(ಎಸ್‌ಐಎ) ಅಡಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದೆ ಅಷ್ಟೇ. ಕಾಯ್ದೆ ಕುರಿತ ವಿರೋಧ ಪಕ್ಷಗಳ ಸಲಹೆಗಳನ್ನು ಸ್ವೀಕರಿಸಿ, ಸಲಹೆ ಸರಿಯಿದ್ದರೆ ಅದನ್ನು ಅನುಷ್ಠಾನಕ್ಕೆ ತರುವುದಾಗಿಯೂ ಎನ್‌ಡಿಎ ಸರ್ಕಾರ ಹೇಳಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಭೂ ಸುಗ್ರೀವಾಜ್ಞೆ ಕುರಿತಂತೆ ಪರಿಹಾರ ಸಮಾನ ಹಕ್ಕು, ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ತಿದ್ದುಪಡಿ ಮಸೂದೆ ಕುರಿತ ವಿಷಯಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement