
ಬೈರೂತ್: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಬಾಲ ಉಗ್ರನೊಬ್ಬ ಗೂಢಚಾರನೆಂದು ಭಾವಿಸಲಾದ ವ್ಯಕ್ತಿಯನ್ನು ಕೊಲ್ಲುತ್ತಿರುವ ದೃಶ್ಯದ ವಿಡಿಯೋವನ್ನು ಇಸಿಸ್ ಬಿಡುಗಡೆಗೊಳಿಸಿದೆ.
ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು, ಮಹಿಳೆ ಹಾಗೂ ಮಕ್ಕಳಿಗೆ ದಾಳಿ ಮಾಡುವುದರ ಬಗ್ಗೆ ತರಬೇತಿ ನೀಡುತ್ತಿದ್ದಾರೆ.
ಇಸಿಸ್ ಉಗ್ರರು ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಇಸ್ರೇಲಿ ಗೂಢಚಾರನೆಂದು ಭಾವಿಸಲಾದ ವ್ಯಕ್ತಿಯನ್ನು ಬಾಲಕನೊಬ್ಬ ಕೊಲ್ಲುತ್ತಿರುವ ದೃಶ್ಯ ಕಂಡು ಬಂದಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸೇರಿಕೊಂಡು ಅವರ ಕಾರ್ಯ ಚಟುವಟಿಕೆಗಳ ಕುರಿತು ಇಸ್ರೇಲ್ ಗೆ ಮಾಹಿತಿ ನೀಡುತ್ತಿದ್ದನೆಂಬ ಆರೋಪವನ್ನು ಉಗ್ರರು ಆತನ ಮೇಲೆ ಹೊರೆಸಿದ್ದು, ಹತ್ಯೆಗೂ ಮುನ್ನ ಆತನಿಂದ 'ಇಂತಹ ಕೃತ್ಯದಲ್ಲಿ ತೊಡಗುವವರಿಗೆ ತನಗಾಗುವ ಶಿಕ್ಷೆಯೇ ಕಾದಿದೆ' ಎಂಬ ಎಚ್ಚರಿಕೆ ಮಾತನ್ನು ಹೇಳಿಸಲಾಗಿದೆ.
ನಂತರ ಆತನನ್ನು ಹತ್ಯಾ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಬಾಲಕನೊಬ್ಬ ಆತನ ತಲೆಗೆ ಗುಂಡಿಟ್ಟು ಹತ್ಯೆ ಮಾಡುವ ದೃಶ್ಯ ಈಗ ಬಿಡುಗಡೆಗೊಂಡಿರುವ ವಿಡಿಯೋದಲ್ಲಿ ಕಂಡು ಬಂದಿದೆ.
ಹತ್ಯೆಗೀಡಾದ ವ್ಯಕ್ತಿ ತಮ್ಮ ಪರ ಗೂಢಚಾರಿಕೆ ಮಾಡುತ್ತಿದ್ದನೆಂಬುದನ್ನು ಇಸ್ರೇಲ್ ನಿರಾಕರಿಸಿದೆ. ಆತ ಉಗ್ರ ಸಂಘಟನೆಗೆ ಸೇರುವ ಸಲುವಾಗಿಯೇ ತೆರಳಿದ್ದನೆಂದು ಹೇಳಿದೆ.
Advertisement