
ನವದೆಹಲಿ: ಪಾಕಿಸ್ತಾನ ಕೋರ್ಟ್ ಮುಂಬೈ ದಾಳಿಯ ಪ್ರಮುಖ ರೂವಾರಿ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿ ಬಿಡುಗಡೆ ಆದೇಶಿಸಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತ ಪಾಕಿಸ್ತಾನದ ಹೈ ಕಮಿಷನರ್ ಗೆ ಸಮನ್ಸ್ ಜಾರಿ ಮಾಡಿದೆ.
ಈ ಸಂಬಂಧ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರನ್ನು ಸೌತ್ ಬ್ಲಾಕ್‌ಗೆ ಕರೆಯಿಸಿಕೊಂಡ ಭಾರತದ ಪ್ರಭಾರ ವಿದೇಶಾಂಗ ಕಾರ್ಯದರ್ಶಿ ಅನಿಲ್ ವಾಧ್ವಾ ಅವರು, ಲಖ್ವಿ ಜೈಲನಿಂದ ಹೊರಗೆ ಬಾರದಂತೆ ನೋಡಿಕೊಳ್ಳುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿತ್ತು ಎಂದು ಎಚ್ಚರಿಸಿದ್ದಾರೆ.
ಮುಂಬೈ ದಾಳಿಯ ರೂವಾರಿ ಉಗ್ರ ಲಖ್ವಿಯ ಬಿಡುಗಡೆ ಆದೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಾಧ್ವಾ, ಪಾಕಿಸ್ತಾನದ ಈ ಬೇಜವಾಬ್ದಾರಿ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಎಸ್. ಜೈ ಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿದೇಶ ಪ್ರವಾಸದಲ್ಲಿರುವುದರಿಂದ, ಅವರ ಅನುಪಸ್ಥಿತಿಯಲ್ಲಿ ವಾಧ್ವಾ ಅವರು ಪಾಕ್ ಹೈಕಮಿಷನರ್ ಅವರನ್ನು ಕಚೇರಿಗೆ ಕರೆಯಿಸಿಕೊಂಡು, ಉಗ್ರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
Advertisement