ವಾಟ್ಸ್‌ಆಪ್‌ನಲ್ಲಿ ಹರಿದಾಡಿದ ಅತ್ಯಾಚಾರ ವಿಡಿಯೋ: ಕೇಂದ್ರಕ್ಕೆ ಸುಪ್ರೀಂ ಚಾಟಿ

ಅತ್ಯಾಚಾರ ವಿಡಿಯೋಗಳು ಒಂದು ತಿಂಗಳಿನಿಂದ ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತಿದ್ದರು ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಅತ್ಯಾಚಾರ ವಿಡಿಯೋ
ಅತ್ಯಾಚಾರ ವಿಡಿಯೋ

ನವದೆಹಲಿ: ಅತ್ಯಾಚಾರ ವಿಡಿಯೋಗಳು ಒಂದು ತಿಂಗಳಿನಿಂದ ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತಿದ್ದರು ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ವಿಡಿಯೋಗಳನ್ನು ಮೊದಲು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸುವಂತೆ ಸಿಬಿಐಗೆ ಸೂಚಿಸಿದೆ. ಅಲ್ಲದೆ ಈ ಕೃತ್ಯದ ವಿರುದ್ಧ ಇನ್ನೂ ಕೂಡ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಛೀಮಾರಿ ಹಾಕಿದೆ. ಕಳೆದ 20 ದಿನಗಳ ಹಿಂದೆ ದೂರು ದಾಖಲಾಗಿದ್ದರು ಈ ಬಗ್ಗೆ ಗೃಹ ಇಲಾಖೆ ಏನು ಮಾಡುತ್ತಿದೆ ಎಂಬುದನ್ನಾದರೂ ನಮಗೆ ತಿಳಿಸಿ ಎಂದು ನ್ಯಾಯಧೀಶರಾದ ಮದನ್ ಬಿ. ಲೋಕೂರ್ ಮತ್ತು ಯು.ಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಗೃಹ ಸಚಿವಾಲಯ ಫೆ.10ರಂದೇ ನ್ಯಾಯಾಲಯಕ್ಕೆ ಅತ್ಯಾಚಾರದ ವಿಡಿಯೋ ದೃಶ್ಯಗಳು ಹಾಗೂ ಇತರ ದಾಖಲೆ ಸಲ್ಲಿಸಿತ್ತು. ಇದರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿರುವುದಾಗಿಯೂ ಸಿಬಿಐ ಹೇಳಿತ್ತು. ಹಾಗಾಗಿ ಈ ಕೂಡಲೇ ದೃಶ್ಯಾವಳಿಗಳನ್ನು ಅಪ್‌ಲೋಡ್ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ ಈ ದುಷ್ಕೃತ್ಯ ಎಸಗಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಅತ್ಯಾಚಾರಿಗಳ ವಿರುದ್ಧ ಜಾಗೃತಿ ಮೂಡಿಸುವ ಎನ್‌ಜಿಒ ಪದಾಧಿಕಾರಿಗಳಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆ ಎಲ್ಲವನ್ನೂ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಆರೋಪಿಗಳ ವಿರುದ್ಧ ಎಂಟು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿತ್ತು. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಕೋರ್ಟ್ ಜಾಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com