
ನವದೆಹಲಿ: `ವಿಶೇಷ ಕೋರ್ಟಲ್ಲಿ ಜಯಲಿಲತಾ ಪ್ರಕರಣದಲ್ಲಿ ವಾದ ಮಾಡಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‍ಪಿಪಿ) ಭವಾನಿ ಸಿಂಗ್‍ಗೆ ಹೈಕೋರ್ಟಲ್ಲಿ ವಾದ ಮಂಡನೆಗೆ ಅವಕಾಶವೇಕೆ? ಅಲ್ಲಿ ಪ್ರಕರಣ ಮುಕ್ತಾಯವಾದಾಗ ಅವರ ಕರ್ತವ್ಯ ಮುಗಿದಿತ್ತು.'- ಹೀಗೆಂದು ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಸುಪ್ರೀಂಕೋರ್ಟ್.
ಅಣ್ಣಾಡಿಎಂಕೆ ನಾಯಕಿ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್‍ರನ್ನು ವಜಾಮಾಡಬೇಕೆಂದು ಡಿಎಂಕೆ ನಾಯಕ ಕೆ.ಅನ್ಬಳಗನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಸರ್ಕಾರವನ್ನು ಕೋರ್ಟ್ ತರಾಟೆಗೆಗೆ ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ಹೈಕೋರ್ಟಲ್ಲಿ ನಡೆಯುತ್ತಿರುವ ಅಣ್ಣಾಡಿಎಂಕೆ ನಾಯಕಿಯ ವಿರುದ್ಧ ಪ್ರಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನೀವೇಕೆ ಅವರನ್ನು ಹೈಕೋರ್ಟಲ್ಲಿ ವಾದ ಮಂಡಿಸದಂತೆ ತಡೆಯಲಿಲ್ಲ. ಅದಕ್ಕೆ ಅವಕಾಶವಿಲ್ಲದಿದ್ದರೂ ನೀವೇನೂ ಕ್ರಮ ಕೈಗೊಂಡಿಲ್ಲ ಎಂದು ನ್ಯಾ.ಮದನ್ ಬಿ.ಲೋಕುರ್ ಮತ್ತು ನ್ಯಾ.ಆರ್. ಭಾನುಮತಿ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ. ಭವಾನಿ ಸಿಂಗ್ ಬದಲಾಗಿ ಮತ್ತೊಬ್ಬ ಎಸ್ ಪಿಪಿಯನ್ನು ನೇಮಕ ಮಾಡದೇ ಇದ್ದದ್ದು ಮತ್ತು ಈ ಬಗ್ಗೆ ಯಾವುದೇ ಉತ್ತರ ಸಲ್ಲಿಸದೇ ಇದ್ದ ಕರ್ನಾಟಕ ಸರ್ಕಾರದ ಧೋರಣೆಯನ್ನೂ ಸುಪ್ರೀಂಕೋರ್ಟ್ ಟೀಕಿಸಿದೆ.
Advertisement