ಏಕಾಂಗಿ ದೆಹಲಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಏಕಾಂಗಿ ದೆಹಲಿಯಿಂದ ಭಾರತದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು..
ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತಾ: ಏಕಾಂಗಿ ದೆಹಲಿಯಿಂದ ಭಾರತದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಎರಡನೇ ಬಾರಿಗೆ ಭೇಟಿ ನೀಡಿರುವ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಬರ್ನಾಪುರದಲ್ಲಿ ಸ್ಫಾಪನೆಯಾಗಿರುವ 16 ಸಾವಿರ ಕೋಟಿ ಮೌಲ್ಯದ ಉಕ್ಕಿನ ಕಾರ್ಖಾನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ರಾಜ್ಯ ಅಭಿವೃದ್ಧಿಯಲ್ಲಿ ಯಶಸ್ಸಿನ ಹೊಸ ಶಿಖರ ತುಲುಪುವುದನ್ನು ನಾನು ನೋಡ ಬಯಸುತ್ತೇನೆ. ಕೇವಲ ಒಂದು ವರ್ಷದಲ್ಲಿ ಭಾರತ ದೇಶದ ಬಗೆಗಿನ ದೃಷ್ಟಿಕೋನ ಬದಲಾಗಿದೆ.

ಹಾವುಗಳ ದೇಶ ಎಂದು ಹೀಗಳೆಯುತ್ತಿದ್ದವರು ಇಂದು ಭಾರತ ದೇಶವನ್ನು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಹೊಗಳುತ್ತಿದ್ದಾರೆ. ಭಾರತ ದೇಶದ ಅಭಿವೃದ್ಧಿಯ ಪ್ರಮುಖ ಮೂರು ಮೂಲಗಳಲ್ಲಿದ್ದು, ಫಲವತ್ತಾದ ಕೃಷಿ ಭೂಮಿ, ನೈಸರ್ಗಿಕ ಸಂಪನ್ಮೂಲ ಮತ್ತು ಈ ದೇಶದ ಕೌಶಲ್ಯಯುಕ್ತ ಯುವಕರ ಕೈಯಲ್ಲಿ ಭಾರತದ ಅಭಿವೃದ್ಧಿ ಇದೆ. ನಾವು ಈ ಮಾರ್ಗದಲ್ಲಿ ನಮ್ಮ ಮುಂದಿನ ಭವಿಷ್ಯವನ್ನು ಚಿಂತಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

2014ರಲ್ಲಿ ಕಲ್ಲಿದ್ದಲು ಹಗರಣದ ಭಾರಿ ಸುದ್ದಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದವು. ಆದರೆ ಈಗ ನಮ್ಮ ಸರ್ಕಾರ ಕೆಲ ನೀತಿಗಳಲ್ಲಿ ಬದಲಾವಣೆ ಮಾಡಿದ್ದು, ಈಗ ಹಗರಣದ ಬಗ್ಗೆಯಲ್ಲ ಕಲ್ಲಿದ್ದಲು ಹರಾಜು ಪ್ರಕ್ರಿಯೆ ಬಗ್ಗೆ ಸುದ್ದಿಗಳು ಪ್ರಸಾರವಾಗುತ್ತಿವೆ. ಕಲ್ಲಿದ್ದಲು ಹರಾಜು ಪ್ರಕ್ರಿಯೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಇದೀಗ ಸುಮಾರು 3 ಲಕ್ಷ ಕೋಟಿ ರು.ಗಳು ಸಂದಾಯವಾಗಿವೆ. ಇದು ನಮ್ಮ ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ.

ನಮ್ಮ ಸರ್ಕಾರ ಎರಡನೇ ಹಸಿರು ಕ್ರಾಂತಿಯ ಕನಸು ಕಾಣುತ್ತಿದ್ದು, ದೇಶದ ಪೂರ್ವ ದಿಕ್ಕಿನ ರಾಜ್ಯಗಳು ಈ ಬಗ್ಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಕೋಲ್ಕತಾದಿಂದ ಪಶ್ಚಿಮ ಬಂಗಾಳವನ್ನು ಬಲಪಡಿಸಲು ಸಾಧ್ಯವಾಗದೇ ಹೋದರೆ ಪೂರ್ವ ವಲಯದ ರಾಜ್ಯಗಳು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹೀಗಾಗಿ ದೇಶದ ಪೂರ್ವ ರಾಜ್ಯಗಳನ್ನು ಬಲಪಡಿಸುವ ಮೂಲಕ ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ.

ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ಅಗತ್ಯ ಸಹಕಾರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಟೀಂ ಇಂಡಿಯಾ ಮಾದರಿಯಲ್ಲಿ ಒಟ್ಟಾಗಿ ದುಡಿಯಬೇಕು. ಆಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com