
ಲಖನೌ: ಜನತಾ ಪರಿವಾರದೊಂದಿಗೆ ವಿಲೀನಗೊಳ್ಳುವ ಮೂಲಕ ಉತ್ತರ ಪ್ರದೇಶ ಹಾಗು ಬಿಹಾರದ ಆಡಳಿತ ಪಕ್ಷಗಳು ಒಂದಾಗಲು ಬಯಸುತ್ತಿದ್ದರೆ, ಉತ್ತರ ಪ್ರದೇಶದ ಬಿಹಾರ ಗಡಿಯಲ್ಲಿರುವ ಜಯಪ್ರಕಾಶ್ ನಾರಾಯಣ್ ಅವರ ಊರಾದ ಸಿತಾಬ್ ದಿಯಾರದ ಒಂದು ಭಾಗದ ಜನತೆ, ಉತ್ತರ ಪ್ರದೇಶದಿಂದ ಪ್ರತ್ಯೇಕವಾಗಿ ಬಿಹಾರದೊಂದಿಗೆ ವಿಲೀನಗೊಳ್ಳುವ ಬೇಡಿಕೆ ಮುಂದಿಟ್ಟಿದ್ದಾರೆ.
ಗಾಗ್ರ ಹಾಗು ಗಂಗಾ ನದಿಗಳ ಕೊರೆತದಿಂದಾಗಿ ಸೂಕ್ತ ರೀತಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ಅಸ್ಥಿರ ಜೀವನ ನಡೆಸುತ್ತಿರುವ ರೈತರು, ನದಿ ಕೊರೆತ ಸಮಸ್ಯೆ ನಿವಾರಿಸಲು ಉತ್ತರ ಪ್ರದೇಶ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೊಪಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತಿರುವ ಉತ್ತರ ಪ್ರದೇಶ ಭಾಗದ ಸಿತಾಬ್ ದಿಯಾರದ ಜನತೆ, ತಮ್ಮನ್ನು ಬಿಹಾರದೊಂದಿಗೆ ವಿಲೀನಗೊಳಿಸಬೇಕೆಂದು ಪಟ್ಟು ಹಿಡಿದು ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.
ಬಿಹಾರದ ವ್ಯಾಪ್ತಿಗೆ ಬರುವ ಸಿತಾಬ್ ದಿಯಾರದ ಪ್ರದೇಶವನ್ನು ಅಲ್ಲಿನ ಸರ್ಕಾರ ಅಭಿವೃದ್ಧಿ ಪಡಿಸಿದೆ. ಕೃಷಿಕರ ಅಭಿವೃದ್ಧಿಗೆ ಬಿಹಾರ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಬಿಹಾರದೊಂದಿಗೆ ವಿಲೀನಗೊಳಿಸಬೇಕೆಂದು ಸಿತಾಬ್ ದಿಯಾರದ ಜನರು ಒತ್ತಾಯಿಸಿದ್ದಾರೆ.
ನದಿ ಕೊರೆತ ಸಮಸ್ಯೆ ಬಗೆಹರಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಈವರೆಗೂ ರಾಜ್ಯ ಸರ್ಕಾರ ಮನವಿಗೆ ಸ್ಪಂದಿಸಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೊರಣೆಯಿಂದ ಬೇಸತ್ತು ಬಿಹಾರದೊಂದಿಗೆ ವಿಲೀನಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Advertisement