ಗಡಿ ಖ್ಯಾತೆ: ಭಾರತ ಭೂಪಟಕ್ಕೆ ಕತ್ತರಿ ಹಾಕಿದ ಚೀನಾ ಮಾಧ್ಯಮ!

ಅರುಣಾಚಲ ಪ್ರದೇಶ ನಮ್ಮದು ಎಂದು ಪದೇ ಪದೇ ಖ್ಯಾತೆ ತೆಗೆಯುತ್ತಲೇ ಬಂದಿರುವ ಚೀನಾ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಭಾರತ ಭೂಪಟಕ್ಕೆ ಕತ್ತರಿ ಹಾಕಿದ್ದು, ಭೂಪಟದಲ್ಲಿ ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳನ್ನು...
ಭಾರತ ಭೂಪಟದಿಂದ  ಜಮ್ಮು-ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳಿಗೆ ಚೀನಾ ಮಾಧ್ಯಮ ಕತ್ತರಿ ಹಾಕಿರುವ ಚಿತ್ರ
ಭಾರತ ಭೂಪಟದಿಂದ ಜಮ್ಮು-ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳಿಗೆ ಚೀನಾ ಮಾಧ್ಯಮ ಕತ್ತರಿ ಹಾಕಿರುವ ಚಿತ್ರ

ಬೀಜಿಂಗ್: ಅರುಣಾಚಲ ಪ್ರದೇಶ ನಮ್ಮದು ಎಂದು ಪದೇ ಪದೇ ಖ್ಯಾತೆ ತೆಗೆಯುತ್ತಲೇ ಬಂದಿರುವ ಚೀನಾ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಭಾರತ ಭೂಪಟಕ್ಕೆ ಕತ್ತರಿ ಹಾಕಿದ್ದು, ಭೂಪಟದಲ್ಲಿ ಕಾಶ್ಮೀರ ಹಾಗೂ  ಅರುಣಾಚಲ ಪ್ರದೇಶಗಳನ್ನು ತೆಗೆದುಹಾಕುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದೆ.

ಚೀನಾ ಅಧಿಕೃತ ಮಾಧ್ಯಮವಾದ ಸಿಸಿಟಿವಿ ಈ ವಿವಾದವನ್ನು ಸೃಷ್ಟಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ ದೃಶ್ಯವನ್ನು ಸುದ್ದಿ ಮಾಡುವಾಗ, ಸಿಸಿಟಿವಿ ಮಾಧ್ಯಮವು ಭಾರತ ಹಾಗೂ ಚೀನಾ ಭೂಪಟವನ್ನು ತೋರಿಸಿದೆ. ಈ ವೇಳೆ ದೃಶ್ಯದಲ್ಲಿ ತೋರಿಸಿದ ಭಾರತದ ಭೂಪಟದಲ್ಲಿ ಕಾಶ್ಮೀರ ಹಾಗೂ ಅರುಚಲಪ್ರದೇಶದ ನಕ್ಷೆಗಳನ್ನು ತೆಗೆದುಹಾಕಿರುವುದು ಕಂಡುಬಂದಿದೆ.

ಕಳೆದ ಹಲವು ದಶಕಗಳಿಂದಲೂ ಭಾರತ ಹಾಗೂ ಚೀನಾ ನಡುವೆ ಅರುಣಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಗಡಿ ವಿಚಾರದ ಕುರಿತು ಭಿನ್ನಾಭಿಪ್ರಾಯಗಳು ಮುಂದುವರೆದುಕೊಂಡು ಬಂದಿದೆ. ಚೀನಾ ಅರುಣಾಚಲ ಪ್ರದೇಶ ಹಾಗೂ ಜಮ್ಮುಕಾಶ್ಮೀರ ತಮ್ಮದೆನ್ನುವ ಮೂಲಕ ತನ್ನ ವಿತಂಡವಾದವನ್ನು ಮಂಡಿಸುತ್ತಲೇ ಇದೆ. ಆದರೆ ಚೀನಾದ ಈ ವಿತಂಡವಾದವನ್ನು ಭಾರತ ವಿರೋಧಿಸುತ್ತಲೇ ಬಂದಿದ್ದು, ಉಭಯ ರಾಷ್ಟ್ರಗಳ ಗಡಿ ವಿವಾದ ಈ ವರೆಗೂ ಬಗೆಹರಿದಿಲ್ಲ.

ಅರುಣಾಚಲ ಪ್ರದೇಶದ ಗಡಿ ವಿಚಾರದ ಕುರಿತು ಭಾರತ ಮಾತನಾಡಬಾರದು, ಗಲಭೆ ಸೃಷ್ಟಿಸುವ ಹೇಳಿಕೆಗಳನ್ನು ರಾಜಕಾರಣಿಗಳು ನೀಡಬಾರದು ಎಂದು ಚೀನಾ ಹೇಳುತ್ತಲೇ ಬಂದಿದೆ. ಆದರೆ ಇದೀಗ ಚೀನಾ ದೇಶವೇ ಈ ರೀತಿಯ ವರ್ತನೆ ತೋರುವ ಮೂಲಕ ತಾನೇ ವಿವಾದಗಳನ್ನು ಸೃಷ್ಟಿಸುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com