ಮುಸ್ಲಿಂ ಎಂಬ ಕಾರಣಕ್ಕೆ ಯುವಕನಿಗೆ ನೌಕರಿ ನಿರಾಕರಣೆ: ಫೇಸ್ ಬುಕ್ ನಲ್ಲಿ ಅಸಮಾಧಾನ

ಮುಂಬೈ ಮೂಲದ ಖ್ಯಾತ ವಜ್ರ ರಫ್ತು ಸಂಸ್ಥೆಯೊಂದು ಮುಸ್ಲಿಂ ಎಂಬ ಒಂದೇ ಕಾರಣಕ್ಕಾಗಿ ಯುವಕನೋರ್ವನ ನೌಕರಿ ಅರ್ಜಿಯನ್ನು ತಿರಸ್ಕಾರ ಮಾಡಿದೆ ಎಂದು ಹೇಳಲಾಗುತ್ತಿದೆ.
ಜೇಷನ್ ಅಲಿಖಾನ್ ಅವರ ಫೇಸ್ ಬುಕ್ ಸ್ಟೇಟಸ್
ಜೇಷನ್ ಅಲಿಖಾನ್ ಅವರ ಫೇಸ್ ಬುಕ್ ಸ್ಟೇಟಸ್

ಮುಂಬೈ: ಮುಂಬೈ ಮೂಲದ ಖ್ಯಾತ ವಜ್ರ ರಫ್ತು ಸಂಸ್ಥೆಯೊಂದು ಮುಸ್ಲಿಂ ಎಂಬ ಒಂದೇ ಕಾರಣಕ್ಕಾಗಿ ಯುವಕನೋರ್ವನ ನೌಕರಿ ಅರ್ಜಿಯನ್ನು ತಿರಸ್ಕಾರ ಮಾಡಿದೆ ಎಂದು ಹೇಳಲಾಗುತ್ತಿದೆ.

ನೂರಾರು ಧರ್ಮಗಳ ನೆಲೆವೀಡಾಗಿರುವ ಭಾರತದಲ್ಲಿ ಪದೇ ಪದೇ ಧಾರ್ಮಿಕ ಅಸಮಾನತೆಯಂತಹ ಘಟನೆಗಳು ಮರುಕಳಿಸುತ್ತಿದ್ದು, ಮುಂಬೈ ಮೂಲದ ಖ್ಯಾತ  ವಜ್ರ ರಫ್ತು ಸಂಸ್ಥೆ ಹರಿಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆ ಅರ್ಜಿದಾರ ಮುಸ್ಲಿಂ ಎಂಬ ಒಂದೇ ಕಾರಣಕ್ಕಾಗಿ ಆತನ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ. ಆಂಗ್ಲ ಧೈನಿಕವೊಂದು ಈ ಬಗ್ಗೆ ವರದಿ ಮಾಡಿದ್ದು, ಎಂಬಿಎ ಪದವೀಧರನಾಗಿರುವ ಜೇಷನ್ ಅಲಿಖಾನ್ ಎಂಬ ಯುವಕ ಮುಸ್ಲಿಂ ಎಂಬ ಒಂದೇ ಕಾರಣಕ್ಕಾಗಿ ಹರಿಕೃಷ್ಣ ಎಕ್ಸ್ ಪೋರ್ಟ್ ಸಂಸ್ಥೆ ಅತನ ಅರ್ಜಿಯನ್ನು ತಿರಸ್ಕರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹರಿಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆ ಜೇಷನ್ ಅಲಿಖಾನ್ ಅವರ ಅರ್ಜಿಯನ್ನು ತಿರಸ್ಕರಿಸುವ ಕುರಿತು ನೀಡಿರುವ ಈ ಮೇಲ್ ಪ್ರತಿಕ್ರಿಯೆಯಲ್ಲಿ ತಮ್ಮ ಸಂಸ್ಥೆ ಕೇವಲ ಮುಸ್ಲಿಮೇತರರನ್ನು ಮಾತ್ರ ಪರಿಗಣಿಸುತ್ತದೆ ಎಂದು ಹೇಳಿದೆ. ಸಂಸ್ಥೆಯ ಈ ನಡವಳಿಕೆ ವಿರುದ್ಧ ತೀವ್ರ ಆಕ್ರೋಶಗೊಂಡ ಜೇಷನ್ ಅಲಿಖಾನ್ ಈ ವಿಚಾರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, "ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಮುದಾಯವನ್ನು ಒಳಗೊಂಡ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಕೆಲಸ ನೀಡುವ ಸಂಸ್ಥೆಗಳು ಮಾತ್ರ ಮುಸ್ಲೀಮರನ್ನು ದೂರ ಇಡುತ್ತಿವೆ. ನನ್ನ ಕೌಶಲ್ಯ ಅಥವಾ ನನ್ನ ಪದವಿ ನೌಕರಿಗೆ ಅರ್ಹವಿಲ್ಲ ಎಂದು ಹೇಳಿದ್ದರೆ ನಾನು ಅದನ್ನು ಸ್ವೀಕರಿಸುತ್ತಿದ್ದೆ. ಆದರೆ ನನ್ನ ಧರ್ಮದಿಂದಾಗಿ ನೌಕರಿ ನಿರಾಕರಿಸಲಾಗಿದೆ ಎಂಬುದನ್ನು ನಾನು ಸ್ವೀಕರಿಸಲಾರೆ. ಘಟನೆಯಿಂದ ನನ್ನ ಆತ್ಮಸ್ಥೈರ್ಯ ಕುಗ್ಗಿದೆ" ಎಂದು ಸಂಸ್ಥೆ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನು ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ದೂಷಿಸಿರುವ ಜೇಷನ್ ಅಲಿ ಖಾನ್ ಅರ ತಂದೆ ಅಲಿ ಅಹ್ಮದ್ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮಾತನಾಡುತ್ತಾರೆ. ಆದರೆ ನಾವು ಮಾತ್ರ ಮುಸ್ಲಿಂ ಎಂಬ ಒಂದೇ ಕಾರಣದಿಂದ ಹಿಂದುಳಿದಿದ್ದೇವೆ. ಮುಸ್ಲಿಮರು ಮಕ್ಕಳನ್ನು ಚೆನ್ನಾಗಿ ಓದಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ನಾನು ನನ್ನ ಮಕ್ಕಳನ್ನು ಕಷ್ಟಪಟ್ಟು ಓದಿಸಿದ್ದೇನೆ. ಸಂಸ್ಥೆಯ ನಡೆಯಿಂದ ನಮಗೆ ಆಘಾತವಾಗಿದ್ದು, ಇದು ನಿಜಕ್ಕೂ ಖಂಡನೀಯ" ಎಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಈಡಾಗುತ್ತಿದ್ದಂತೆಯೇ ತೇಪೆ ಹಾಕಲು ಮುಂದಾಗಿರುವ ಹರಿ ಕೃಷ್ಣ ಎಕ್ಸ್ ಪೋರ್ಟ್ ಸಂಸ್ಥೆ, ಟೈಪಿಂಗ್ ತಪ್ಪಿನಿಂದಾಗಿ ಈ ಪ್ರಮಾದವಾಗಿದೆ ಎಂದು ಹೇಳಿದೆ. ಆದರೆ ಸಂಸ್ಥೆಯ ಪ್ರತಿಕ್ರಿಯೆಯನ್ನು ತಿರಸ್ಕರಿಸಿರುವ ಜೇಷನ್ ಯಾದುವೇ ಕಾರಣಕ್ಕೂ ತಾನು ಇನ್ನುಮುಂದೆ ಈ ಸಂಸ್ಥೆಯ ನೌಕರಿಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಧಾರ್ಮಿಕ ಕಾರಣದಿಂದಾಗಿ ಅರ್ಜಿ ನಿರಾಕರಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com