

ಮುಂಬಯಿ :ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಶಿವಸೇನೆ ಮುಖಂಡ ರಾಜುಶಿಂಧೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಮುಂಬಯಿನ ಫಿಲ್ಮ್ ಸಿಟಿ ಯಲ್ಲಿ ನಡೆದಿದೆ.
ಘಟನೆ ನಡೆದ ಸ್ಥಳದಿಂದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 20 ಅಡಿ ದೂರದಲ್ಲಿದ್ದರು. ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಸ್ಟುಡಿಯೋ 2ರ ಬಳಿ ನಡೆದ ಈ ಗುಂಡಿನ ದಾಳಿಯ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಇನ್ನು ಘಟನೆ ನಂತರ ಮುಂಬಯಿ ಫಿಲ್ಮ್ ಸಿಟಿ ಬಳಿ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. ಇನ್ನು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ರಾಜು ಶಿಂಧೆ ಅವರ ಹೊಟ್ಟೆ ಹಾಗೂ ಕೈಗೆ ಗುಂಡು ತಗುಲಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬಯಿ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಶೋಧಕ್ಕೆ ಬಲೆ ಬೀಸಿದ್ದಾರೆ.