
ಮುಂಬೈ: 2025 ರ ವೇಳೆಗೆ ಭಾರತದಲ್ಲಿ ನೀರಿನ ಅಭಾವ ವಿಪರೀತವಾಗಲಿದೆ. ಇದು ದೇಶದಲ್ಲಿ ಜಲ ವ್ಯಾಪಾರೀಕರಣಕ್ಕೆ ನಾಂದಿ ಹಾಡಲಿದೆ.
ಎವ್ರಿಥಿಂಗ್ ಎಬೌಟ್ ವಾಟರ್(ಇಎ)ಎಂಬ ಸಂಸ್ಥೆ ನಡೆಸಿರುವ ಅಧ್ಯಯನ ಇಂತಹದೊಂದು ವಿಚಾರವನ್ನು ಬಹಿರಂಗಪಡಿಸಿದೆ. ದೇಶದ ನೀರಾವರಿಗೆ ಬಳಸಲಾಗುತ್ತಿರುವ ಶೇ.70 , ಗೃಹ ಬಳಕೆಗೆ ಬಳಸುವ ಶೇ. 80 ರಷ್ಟು ನೀರಿನ ಮೂಲವಾಗಿರುವ ಅಂತರ್ಜಲ ಮಟ್ಟ ಬರಿದಾಗುತ್ತಿದೆ ಎಂದು ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.
ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವೆ ಭಾರಿ ಅಂತರ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ನೀರಿನ ಕ್ಷೇತ್ರದಲ್ಲಿ ಬರೋಬ್ಬರಿ 13 ಶತಕೋಟಿ ಡಾಲರ್ ಹೂಡಿಕೆ ಮಾಡಲು ಸಾಗರೋತ್ತರ ಹೂಡಿಕೆದಾರರು ಮುಂದಾಗಿದ್ದಾರೆ ಎಂದೂ ಅಧ್ಯಯನ ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ರಾಷ್ಟ್ರಗಳಲ್ಲಿ ಕೆನಡಾ, ಇಸ್ರೇಲ್, ಜರ್ಮನಿ, ಇಟಲಿ ಅಮೇರಿಕಾ, ಚೀನಾ, ಬೆಲ್ಜಿಯಂ, ಕೂಡಾ ಸೇರಿವೆ. ಒಟ್ಟಾರೆ ಮುಂದಿನ ಮೂರು ವರ್ಷಗಳಲ್ಲಿ ನೀರಿನ ಕ್ಷೇತ್ರಕ್ಕೆ 18 ಸಾವಿರ ಕೋಟಿ ಹರಿದುಬರಲಿದೆ.
ಮಹಾರಾಷ್ಟ್ರವೇ ನೀರಿನ ಹಬ್: ಮಹಾರಾಷ್ಟ್ರ ನೀರಿನ ಕ್ಷೇತ್ರದ ಹಬ್ ಆಗಿ ಪರಿವರ್ತನೆಗೊಳ್ಳುತ್ತಿದೆ ಎಂಬ ಮಾಹಿತಿಯೂ ಇಎ ಸಂಸ್ಥೆ ನಡೆಸಿರುವ ಅಧ್ಯಯನದ ಮೂಲಕ ತಿಳಿದುಬಂದಿದೆ. ಮುಂಬೈ ಪುಣೆಗಳಲ್ಲಿ ಈಗಾಗಲೇ ಸುಮಾರು 12 ಅಂತಾರಾಷ್ಟ್ರೀಯ ಕಂಪನಿಗಳು ವಿನ್ಯಾಸ ಮತ್ತು ಇಂಜಿನಿಯರಿಂಗ್ ಕೇಂದ್ರಗಳನ್ನು ಸ್ಥಾಪಿಸಿವೆ. ಜತೆಗೆ ಈ ರಾಜ್ಯದಲ್ಲಿ ಸದ್ಯ 1200 ಕ್ಕೂ ಹೆಚ್ಚು ಕಂಪನಿಗಳು ನೀರು ಮತ್ತು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ತೊಡಗಿವೆ. ಇದೆ ವೇಳೆ ಕೇಂದ್ರ ಸರ್ಕಾರ ಗಂಗಾ ನದಿ ಸ್ವಚ್ಛತಾ ಯೋಜನೆ ಮೂಲಕ ನೀರಿನ ಕ್ಷೇತ್ರದಲ್ಲಿ ಭಾರಿ ಹೂಡಿಕೆಗೆ ಮುಂದಾಗಿರುವುದರಿಂದ ಸುಮಾರು 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಬಹುದ್ದು ಎಂದು ಅಂದಾಜಿಸಲಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ಸುಮಾರು 30 ಡಿಸ್ಯಾಲಿನೇಶನ್ ಸ್ಥಾವರಗಳು ಸ್ಥಾಪನೆಯಾಗುವ ಸಾಧ್ಯತೆಯಿದೆ. ಇಂತಹ ನೀರಿನ ವೆಚ್ಚವು ಮುಂದಿನ 5 ವರ್ಷಗಳಲ್ಲಿ ಶೇ.20 ಮತ್ತು 2020 ರ ವೇಳೆಗೆ ಶೇ.50 ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
Advertisement