
ಚೆನ್ನೈ: ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ರಾಜಸ್ತಾನದ ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಅವರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಒಲಿದುಬಂದಿದೆ.
ಬಿಜೆಪಿ ಸದಸ್ಯ ಪಿಪಿ ಚೌಧರಿ ಅವರು ಸಂಸತ್ತಿನ ಮುಂಗಡಪತ್ರದ ಅಧಿವೇಶನದ ಕೊನೆಯವರೆಗೆ ಸದನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 2015ರ "ಸಂಸದ ರತ್ನ" ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. 16ನೇ ಲೋಕಸಭೆಯಲ್ಲಿ ಮುಂಗಡಪತ್ರ ಕಲಾಪದ ಅಂತ್ಯದವರೆಗೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ್ದಕ್ಕಾಗಿ "ಸಂಸದ ರತ್ನ-2015" ಪ್ರಶಸ್ತಿಗೆ ಪಾತ್ರರಾಗಿರುವ ನಾಲ್ವರು ಸಂಸದರಲ್ಲಿ ಚೌಧರಿ ಕೂಡ ಒಬ್ಬರಾಗಿದ್ದಾರೆ’ ಎಂದು ಪ್ರೈಮ್ಪಾಯಿಂಟ್ ಪೌಂಡೇಷನ್ನ ಅಧ್ಯಕ್ಷ ಕೆ. ಶ್ರೀನಿವಾಸನ್ ಬುಧವಾರ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರೇತರ ಸಂಘಟನೆಯಾಗಿರುವ ಪ್ರೈಮ್ಪಾಯಿಂಟ್ ಫೌಂಡೇಷನ್ ಸಂಸ್ಥೆಯು ಸಂಸತ್ತಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ ಸದಸ್ಯರಿಗೆ 2009ರಿಂದಲೂ "ಸಂಸದ ರತ್ನ" ಪ್ರಶಸ್ತಿ ನೀಡುತ್ತಿದೆ. ಸದಸ್ಯರು ಎತ್ತುವ ಪ್ರಶ್ನೆಗಳ ಸಂಖ್ಯೆ, ಅವರು ಪಾಲ್ಗೊಳ್ಳುವ ಚರ್ಚೆಗಳ ಸಂಖ್ಯೆ, ಅವರು ಮಂಡಿಸುವ ಖಾಸಗಿ ಮಸೂದೆಗಳ ಸಂಖ್ಯೆ ಹಾಗೂ ಸದನದಲ್ಲಿ ಹಾಜರಾತಿ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಸ್ತುತ ಪಾಲಿ ಕ್ಷೇತ್ರದ ಸಂಸದ ಪಿಪಿ ಚೌಧರಿ ಅವರು 2 ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಅತ್ಯಂತ ಹೆಚ್ಚು (176) ಚರ್ಚೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ ಮತ್ತು ಮೊದಲ ಬಾರಿಯ ಸದಸ್ಯರಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿದ್ದುದಕ್ಕಾಗಿ ಹೀಗೆ 2 ಪ್ರಶಸ್ತಿಗಳು ಚೌಧರಿ ಅವರಿಗೆ ಲಭಿಸಿವೆ ಎಂದು ತಿಳಿದುಬಂದಿದೆ.
ಪ್ರೈಮ್ ಫೌಂಡೇಷನ್ ನೀಡುವ ಇನ್ನೆರಡು ಪ್ರಶಸ್ತಿಗಳಿಗೆ ಮಹಾರಾಷ್ಟ್ರದ ಶಿರಂಗ್ ಕ್ಷೇತ್ರದ ಶಿವಸೇನಾ ಸದಸ್ಯ ಚಂದು ಬರ್ನೆ ಮತ್ತು ಜಾರ್ಖಂಡ್ನ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು ಪಾತ್ರರಾಗಿದ್ದಾರೆ.
Advertisement