
ರಾಯ್ ಬರೇಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಗಾಂಧಿ ಕುಟುಂಬದ ನಡುವಿನ ವಾಗ್ದಾಳಿ ಮುಂದುವರೆದಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
2 ದಿನಗಳ ಪ್ರವಾಸಕ್ಕಾಗಿ ಬುಧವಾರ ಸೋನಿಯಾ ಗಾಂಧಿ ಅವರ ಸ್ವಕ್ಷೇತ್ರ ರಾಯ್ ಬರೇಲಿಗೆ ಆಗಮಿಸಿದ ಪ್ರಿಯಾಂಕ ಗಾಂಧಿ ಅವರು, ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಸಚಿವೆ ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವೇ ಕಳೆದಿದೆ. ಆದರೂ ಅಮೇಥಿ ಕ್ಷೇತ್ರಕ್ಕೆ ಐಐಟಿ ಸ್ಥಾಪನೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
"ಸ್ಮೃತಿ ಇರಾನಿ ಅವರು ಕೇಂದ್ರದ ಮಾನವ ಸಂಪನ್ಮೂಲ ಸಚಿವರಾಗಿದ್ದು, ಮೊದಲು ಅವರು ನನ್ನ ಪ್ರಶ್ನೆಗೆ ಉತ್ತರಿಸಲಿ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ವರ್ಷವೇ ಕಳೆದಿದೆ. ಆದರೂ ಅಮೇಥಿಯಲ್ಲೇಕೆ ಐಐಟಿ ಸ್ಥಾಪನೆಯಾಗಿಲ್ಲ. ಸ್ವತಃ ಸ್ಮೃತಿ ಇರಾನಿ ಅವರೇ ಶಿಕ್ಷಣ ಖಾತೆಯನ್ನು ಹೊಂದಿದ್ದು, ಈ ಭಾಗದ ಯುವ ಜನತೆ ಸಾಕಷ್ಟು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಖಾತೆಯೇ ಆಗಿದ್ದು, ಅವರೇಕೆ ಈ ಬಗ್ಗೆ ಗಮನ ಹರಿಸುತ್ತಿಲ್ಲ" ಎಂದು ಪ್ರಿಯಾಂಕ ಪ್ರಶ್ನಿಸಿದರು.
ನಿನ್ನೆಯಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರ ಅಮೇಥಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋನಿಯಾ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಮೇಥಿ ಜನರನ್ನು ತಲುಪಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದ್ದು, ಅಮೇಥಿ ಜನರಿಗೆ ನಮ್ಮ ಸರ್ಕಾರ ರೈಲು ಮಾರ್ಗವನ್ನು ನೀಡಿದೆ. ಈ ಹಿಂದಿದ್ದ ಸರ್ಕಾರ 10 ವರ್ಷದಲ್ಲಿ ಮಾಡದಿರುವ ಕೆಲಸವನ್ನು ಎನ್ ಡಿಎ ಸರ್ಕಾರ 1 ವರ್ಷದಲ್ಲಿ ಮಾಡಿದ್ದು, ಇದೀಗ ನಮ್ಮ ಸರ್ಕಾರ ಅಮೇಥಿ-ಉಂಚಾಹಾರ್ ನಲ್ಲಿ ರೈಲು ಮಾರ್ಗವನ್ನು ನಿರ್ಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಿದೆ ಎಂದು ಹೇಳಿದ್ದರು.
Advertisement