ವಧುವಿನ ಸಂಬಂಧಿಗೆ ಚುಂಬಿಸಿದ ಮಾವ- ಮದುವೆ ಮುರಿದ ಯುವತಿ

ಅದೊಂದು ಮದುವೆ ಸಮಾರಂಭ. ಅಲ್ಲಿ ಎಲ್ಲವೂ ಸರಿಯಿದ್ದಿದ್ದರೇ ಯುವಕ- ಯುವತಿ ವಿವಾಹವಾಗಿ ಸಂಸಾರ ಆರಂಭಿಸಬೇಕಿತ್ತು.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾನ್ಪುರ: ಅದೊಂದು ಮದುವೆ ಸಮಾರಂಭ. ಅಲ್ಲಿ ಎಲ್ಲವೂ ಸರಿಯಿದ್ದಿದ್ದರೇ ಯುವಕ- ಯುವತಿ ವಿವಾಹವಾಗಿ ಸಂಸಾರ ಆರಂಭಿಸಬೇಕಿತ್ತು. ಆದರೆ ವಧುವಿನ ಸಂಬಂಧಿ ಯುವತಿಗೆ,  ವರನ ತಂದೆ ಮುತ್ತಿಕ್ಕಿದ ಕಾರಣ ಮದುವೆಯೇ ನಿಂತು ಹೋಯ್ತು
ಹೌದು,  ಇಂಥದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಕಾನ್ಪುರದ ಫಾರೂಖಾಬಾದ್ ಜಿಲ್ಲೆಯ ಗ್ರಾಮ.

ಫಾರೂಖಾಬಾದ್ ನ  ನಾಗ್ಲಾ ಕಾಯರ್ ಬಂದ್ ಎಂಬ ಹಳ್ಳಿಯ ಪರಮೇಶ್ವರಿ ದಯಾಳ್ ಪುತ್ರಿ ರುಚಿಗೆ  ಇಟಾ ನಗರದ ಜೈತಾರ ಗ್ರಾಮದ ಬಾಬೂರಾಂ ಮಗ ರಾಜೇಶ್ ಜೊತೆ  ವಿವಾಹ ನಿಶ್ಚಯವಾಗಿತ್ತು.  ಈ ಭಾಗದ ಸಂಪ್ರದಾಯವಾದ ಜೈಮಲ್ ಎಂಬ ಸಮಾರಂಭದ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು.

 ಆದರೆ ಜೈಮಲ್ ಆಚರಣೆ ವೇಳೆ ವಧುವಿನ ಸಂಬಂಧಿ ಅನಿತಾ  ತನ್ನ ಅಕ್ಕನ ಜೊತೆ  ನಿಲ್ಲಲು ವೇದಿಕೆಗೆ ಬಂದಳು. ಈ ವೇಳೆ ವರನ ತಂದೆ  ಹಿಂದು ಮುಂದು ನೋಡದೇ ಮದುವೆ ಖುಷಿಯಲ್ಲಿ ಆಕೆಗೆ ಮುತ್ತಿಕ್ಕಿದ. ಇದನ್ನು ನೋಡಿದ ವಧು ರುಚಿ ಕೋಪಗೊಂಡು ತನಗೆ ಈ ಸಂಬಂಧ ಇಷ್ಟವಿಲ್ಲ. ನಾನು ಮದುವೆಯಾಗುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾಳೆ. ಜೊತೆಗೆ ಕೂಡಲೇ ವಾಪಸ್ ಹೋಗುವಂತೆಯೂ ತಿಳಿಸಿದ್ದಾಳೆ.

ವರನ ತಂದೆ ಅನಿತಾ ಹಾಗೂ ಆಕೆಯ ಪೋಷಕರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ ಮನಸ್ಸು ಬದಲಾಯಿಸದ ರುಚಿ ಮದುವೆಯನ್ನು ನಿರಾಕರಿಸಿದ್ದಾಳೆ.

ಆನಂತರ ಮಧ್ಯ ಪ್ರವೇಶಿಸಿದ ಪೊಲೀಸರು ರಾಜಿ ಸಂಧಾನ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಮದುವೆಗೆ ವಧುವಿನ ಪೋಷಕರು ಖರ್ಚು ಮಾಡಿದ್ದ 27.900 ರೂಪಾಯಿ ಹಣವನ್ನು ವರನ ತಂದೆ ವಾಪಸ್ ನೀಡಿದ್ದಾರೆ.

ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಭಾಜ ಭಜಂತ್ರಿ ಸಮೇತ ಬಂದಿದ್ಧ ವರನ ಕಡೆಯವರು ಮಾಡಿದ್ದುಣ್ಣೊ ಮಹಾರಾಯ ಎಂಬಂತೆ ಬರಿಗೈಯಲ್ಲಿ ಮನೆಗೆ ವಾಪಸ್ ಹೋದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com