
ಮೀರತ್ : ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತು ಜನಜನಿತ. ಆದರೆ ಸ್ವರ್ಗವಾಸಿಗಳಾದ ಮೇಲೆ ಮದುವೆ ನಡೆದದ್ದು ಕಂಡಿದ್ದೀರಾ? ಕೇಳಿದ್ದೀರಾ? ಅಲೆಮಾರಿ ಪಂಗಡದ ಎರಡು ಕುಟುಂಬಗಳು. ಒಂದು ಕುಟುಂಬ ಉತ್ತರ ಪ್ರದೇಶದ ಸಹರಣ್ ಪುರದಲ್ಲಿದ್ದರೆ ಇನ್ನೊಂದು ಪಕ್ಕದ ಹರಿದ್ವಾರ ಜಿಲ್ಲೆಯಲ್ಲಿತ್ತು. ಒಂದು ಮನೆಯಲ್ಲಿ ಹೆಣ್ಣು ಹುಟ್ಟಿದರೆ ಇನ್ನೊಂದರಲ್ಲಿ ಗಂಡು ಹುಟ್ಟಿತು.ಕೂಸುಗಳು ಹುಟ್ಟಿದ ಕೂಡಲೇ ಕುಲಾವಿ ಮಾತಿನ ಬದಲು ಮದುವೆ ಮಾತು ನಡೆಯಿತು.ವಯಸ್ಸಿಗೆ ಬಂದಕೂಡಲೇ ಇವರಿಬ್ಬರಿಗೂ ಮದುವೆ ಎಂದು ನಿಶ್ಚಯವಾಯ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಎರಡೂ ಮಕ್ಕಳು ವಯಸಲ್ಲದ ವಯಸ್ಸಿನಲ್ಲಿ ಕಾಯಿಲೆಗೆ ತುತ್ತಾದವು. ತೊಟ್ಟಿಲಿಂದಿಳಿದು ಹೆಜ್ಜೆಯಿಡುವ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದವು.
ಇದು ಹದಿನೆಂಟು ವರ್ಷಗಳ ಹಿಂದೆ ನಡೆದ ಘಟನೆ. ಆದರೆ ಪರಸ್ಪರ ಕೊಟ್ಟುಕೊಂಡಿದ್ದ ಮಾತುಗಳು ಇಬ್ಬರೂ ಮರೆಯಲಿಲ್ಲ.ಇಬ್ಬರೂ ಮುರಿಯಲಿಲ್ಲ. ಮಂಗಳವಾರ ದಂದು ಅವರ ಮದುವೆಗೆ ಮುಹೂರ್ತ ನಿಗದಿಯಾಯಿತು.
ಇಬ್ಬರ ಹೆಸರಲ್ಲೂ ಒಂದೊಂದು ಬೊಂಬೆ ರೆಡಿಯಾಯ್ತು. ಹರಿದ್ವಾರದಿಂದ ಗಂಡಿನ ಕಡೆಯ ದಿಬ್ಬಣ ಬಂತು. ನೆಂಟರಿಷ್ಟರ ಕರೆದು, ಪುರೋಹಿತರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯೂ ನಡೆದುಹೋಯ್ತು. ಸ್ವರ್ಗದಲ್ಲಿ ಕುಳಿತು ಆ ಆತ್ಮಗಳು ತಮ್ಮ ಮದುವೆ ಸಂಭ್ರಮವನ್ನು ಕಂಡು ಅಚ್ಚರಿಪಟ್ಟಿರಬಹುದೇನೋ! ದೊಂಬರಾಟವನ್ನೇ ವೃತ್ತಿಯಾಗಿಸಿಕೊಂಡಿರುವ ಈ ಅಲೆಮಾರಿ ಗುಂಪುಗಳಲ್ಲಿ ಬೊಂಬೆ ಮದುವೆ ಎಂಬುದು ತಲತಲಾಂತರದಿಂದ ಬಂದಿರುವ ಸಂಪ್ರದಾಯವಂತೆ. ಮೀರ್‍ಪುರ ಮೋಹನಪುರ ಗ್ರಾಮಗಳ ಹೊರವಲಯದಲ್ಲಿ ವಾಸಿಸುವ ಇವರು ಊರು ಊರುಗಳಲ್ಲಿ ದೊಂಬರಾಟ ಪ್ರದ ರ್ಶಿಸಿ ಹೊಟ್ಟೆಹೊರೆ ದುಕೊಳ್ಳುತ್ತಾರೆ.ಇತ್ತೀಚಿನವರು ಮಾತ್ರ ಮದುವೆಮನೆಗಳಲ್ಲಿ ಬ್ಯಾಂಡ್ ಬಾರಿಸುವ ಕಾಯಕ ಮಾಡುತ್ತಾರೆ.
Advertisement