ಚೆನ್ನೈನಲ್ಲಿ ರಾತ್ರಿ ಇಡೀ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಚೆನ್ನೈ ನಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆ ಸತತ 5ನೇ ದಿನವೂ ಮುಂದುವರೆದಿದ್ದು, ಚೆನ್ನೈ ನಗರ ಸಂಪೂರ್ಣ ಸ್ಥಬ್ದಗೊಂಡಿದೆ...
ಚೆನ್ನೈನಲ್ಲಿ ಸತತ ಮಳೆ (ಸಂಗ್ರಹ ಚಿತ್ರ)
ಚೆನ್ನೈನಲ್ಲಿ ಸತತ ಮಳೆ (ಸಂಗ್ರಹ ಚಿತ್ರ)

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಚೆನ್ನೈ ನಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆ ಸತತ 5ನೇ ದಿನವೂ ಮುಂದುವರೆದಿದ್ದು, ಚೆನ್ನೈ ನಗರ ಸಂಪೂರ್ಣ ಸ್ಥಬ್ದಗೊಂಡಿದೆ.

ಕಳೆದ ಒಂದೇ ರಾತ್ರಿ ಚೆನ್ನೈನಲ್ಲಿ 14.9 ಸೆಂ.ಮೀನಷ್ಟು ಮಳೆಯಾಗಿದ್ದು, ಬೆಳಗ್ಗೆ ಕೂಡ ಮಳೆ ಮುಂದುವರೆದಿದೆ. ಹವಾಮಾನ ಇಲಾಖೆಯ ವರದಿಗಳಂತೆ ಇನ್ನೂ ಒಂದು ವಾರ ಚೆನ್ನೈನಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯಲಿದ್ದು, ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡು ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಿರುವ ರಜೆಯನ್ನು ಮುಂದುವರೆಸಿದೆ. ಮಳೆಯಿಂದಾಗಿ ನವೆಂಬರ್ 9ರಿಂದಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಇನ್ನು ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚೆನ್ನೈನ ಪ್ರಮುಖ ರೈಲು ನಿಲ್ದಾಣಗಳ ರೈಲು ಹಳಿಗಳ ಮೇಲೆ ನೀರು ನಿಂತಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಚೆನ್ನೈನ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಹೊರಡ ಬೇಕಿದ್ದ ರೈಲುಗಳು ಅಲ್ಲಿಯೇ ನಿಂತಿದ್ದು, ನಿಲ್ದಾಣಕ್ಕೆ ಆಗಮಿಸಬೇಕಿದ್ದ ರೈಲುಗಳು ಕೂಡ ತಡವಾಗಿ ಆಗಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸಾವಿರಾರು ರೈಲು ಪ್ರಯಾಣಿಕರು ಪರದಾಡುವಂತಾಗಿದೆ.

ಚೆನ್ನೈನಿಂದ 180 ಕಿ.ಮೀ ದೂರದಲ್ಲಿರುವ ಕುಡಲೋರ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳಲ್ಲಿ ಮಂಡಿಯವರೆಗೂ ನೀರು ನಿಂತಿದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಸ್ಥಳೀಯ ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com