ಗಡಿಯಲ್ಲಿ ಉಗ್ರರ ದಾಳಿ: ಗುಂಡಿನ ದಾಳಿಗೆ ಭಾರತೀಯ ಯೋಧ ಬಲಿ

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಯೋಧ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ...
ಜಮ್ಮು ಮತ್ತು ಕಾಶ್ಮೀರ ಗಡಿ (ಸಂಗ್ರಹ ಚಿತ್ರ)
ಜಮ್ಮು ಮತ್ತು ಕಾಶ್ಮೀರ ಗಡಿ (ಸಂಗ್ರಹ ಚಿತ್ರ)

ಜಮ್ಮು: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಯೋಧ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸೋಮವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೋಶೆರಾ ಸೆಕ್ಟರ್ ನಲ್ಲಿ ಪಹರೆ ನಡೆಸುತ್ತಿದ್ದ ಯೋಧನ ಮೇಲೆ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಯೋಧನನ್ನು ಇತರೆ ಯೋಧರು ಸೇನಾ ಆಸ್ಪತ್ರೆಗೆ ದಾಖಲು ಮಾಡಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮೃತ ಯೋಧನನ್ನು ಕೇರಳ ಮೂಲದ ಸೆಪೋಯ್ ಸುದಿಮೇಶ್ ಎಂದು ಗುರುತಿಸಲಾಗಿದೆ.

ಕಳೆದ 2-3 ದಿನಗಳಿಂದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿ ಉಗ್ರ ಒಳನುಸುಳುವಿಕೆ ಚಟುವಟಿಕೆಗಳು ತೀವ್ರಗೊಂಡ ಹಿನ್ನಲೆಯಲ್ಲಿ ಈ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ನೋಶೆರಾ ಸೆಕ್ಟರ್ ನಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದ ಹಿನ್ನಲೆಯಲ್ಲಿ ಸೆಪೋಯ್ ಸುದಿಮೇಶ್ ಅದರ ವೀಕ್ಷಣೆಗೆ ತೆರಳಿದಾಗ ಉಗ್ರರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಸ್ತುತ ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಪಾಕಿಸ್ತಾನ ಸೇನೆಯ ಕೃಪಾ ಪೋಷಣೆಯಿಂದಲೇ ಉಗ್ರರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಾಳಿ ಬಳಿಕ ಉಗ್ರರು ಭಾರತದ ಗಡಿಯೊಳಗೆ ನುಸುಳಿರುವ ಸಾಧ್ಯತೆ ಇದ್ದು, ಸೇನಾಧಿಕಾರಿಗಳು ತೀವ್ರ ಶೋಧದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com