
ನವದೆಹಲಿ: ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಐವರು ಅಪರಾಧಿಗಳಿಗೆ ಮಂಗಳವಾರ ಮರಣದಂಡನೆ ಶಿಕ್ಷೆಯನ್ನು ನೀಡಿದೆ.
ಒಡಿಶಾದ ಬೆಕ್ಲುಂಡಿ ಗ್ರಾಮಕ್ಕೆ ಸೇರಿದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ 2012ರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಹತ್ಯೆ ಮಾಡಲಾಗಿತ್ತು.. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರೂ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ತಿಳಿದುಬಂದಿದೆ.
ಮಚಾ ಮುಂಡಾ, ಮಂಗಲ್ ಪ್ರುಸ್ಟಿ, ಜಿತೇನ್ ಮುಂಡಾ, ಹರ್ಜಿತ್ ಸಿಂಗ್ ಹಾಗೂ ಬಿಸ್ವಾನಾಥ್ ಮುಂಡಾ ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ.
2012ರಲ್ಲಿ ಘಟನೆ ನಡೆದಿತ್ತು. ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿ ಬಾರ್ಬಿಲ್ ನಲ್ಲಿರುವ ಶಾಲೆಯೊಂದರಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು. ಟ್ಯೂಷನ್ ಗೆಂದು ಹೋಗಿದ್ದ ಬಾಲಕಿ ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಇದರಿಂದಾಗಿ ಗಾಬರಿಗೊಂಡಿದ್ದ ಬಾಲಕಿಯ ಕುಟುಂಬಸ್ಥರು ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಬಾಲಕಿ ದೇಹ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
Advertisement