

ನವದೆಹಲಿ: ಸದನದಲ್ಲಿ ಜಾತ್ಯಾತೀತತೆ ಪದ ಶಾಸಕರ ನಡುವೆ ಗಲಾಟೆಯನ್ನುಂಟು ಮಾಡಿದ್ದು, ಭಾರತದಲ್ಲಿ ಜಾತ್ಯಾತೀತತೆ ಪದ ಹೆಚ್ಚು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಅಸಹಿಷ್ಣುತೆ ಕುರಿತಂತೆ ಸದನದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವೇಳೆ ಮಾತನಾಡಿರುವ ಅವರು, ದೇಶದಲ್ಲಿ ಜಾತ್ಯಾತೀತೆ ಪದ ಹೆಚ್ಚು ದುರುಪಯೋಗವಾಗುತ್ತಿದ್ದು, ಇದು ಮೊದಲು ನಿಲ್ಲಬೇಕಿದೆ. ಕಾರಣ ಜಾತ್ಯಾತೀತತೆ ಪದದ ಬಳಕೆ ಅತಿರೇಕಕ್ಕೇರಿರುವುದು. ಸಮಾಜದಲ್ಲಿ ಇದರಿಂದ ಅಶಾಂತಿಯುಂಟಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಕಿರುತಂತೆ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿಯೆಂದು ಕರೆಯಲಾಗುತ್ತದೆ. ಅವರು ಎಂದಿಗೂ ಜಾತ್ಯಾತೀತತೆ ಹಾಗೂ ಸಾಮಾಜಿಕತೆ ಅಗತ್ಯತೆ ಬಗ್ಗೆ ನಂಬಿಕೆ ಇಟ್ಟಿರಲಿಲ್ಲ. ಜಾತ್ಯಾತೀತತೆ ಹಾಗೂ ಸಾಮಾಜಿಕತೆ ಎಂಬುದು ಭಾರತೀಯ ಜನಸಮುದಾಯದ ತತ್ವವಾಗಿದ್ದು, ಇದನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಆಳ್ವಿಕೆ ನಂತರವಷ್ಟೇ ಈ ಪ್ರಸ್ತಾವನೆಯನ್ನು ಸೇರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ರಾಜನಾಥ್ ಸಿಂಗ್ ಅವರ ಈ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು ಹೇಳಿಕೆಯನ್ನು ವಿರೋಧಿಸಿ ಸದನದಲ್ಲೇ ರಾಜನಾಥ್ ಸಿಂಗ್ ವಿರುದ್ಧ ವಾಗ್ದಾಳಿಗೆ ಮುಂದಾಗಿದ್ದಾರೆ ಅಲ್ಲದೇ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಂತೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು, ವೈಯಕ್ತಿಕ ಕಾರಣಕ್ಕಾಗಿ ಸಂವಿಧಾನವನ್ನು ಹಾಳು ಮಾಡಿದವರು ಯಾರು, ಇದನ್ನು ತಿದ್ದುಪಡಿ ಮಾಡಿ ಜನರನ್ನು ಜೈಲಿಗೆ ಕಳುಹಿಸಿದವರು ಯಾರೆಂಬುದು ಇಡೀ ದೇಶದ ಜನಕ್ಕೆ ಗೊತ್ತಿದೆ. ಕಾಂಗ್ರೆಸ್ ನ ಇತಿಹಾಸ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ವಿಮರ್ಶೆ ಮಾಡುವ ನೈತಿಕ ಹಕ್ಕು ಕಾಂಗ್ರೆಸ್'ಗೆ ಇಲ್ಲ ಎಂದು ಹೇಳಿದ್ದಾರೆ.