ಮಹಿಳೆಯರು ಮಕ್ಕಳನ್ನು ಹೆರಲಷ್ಟೇ ಲಾಯಕ್ಕು: ಸುನ್ನಿ ಮುಖಂಡನ ವಿವಾದಾತ್ಮಕ ಹೇಳಿಕೆ

ಲಿಂಗ ಸಮಾನತೆ ಎಂಬುದು ಇಸ್ಲಾಮ್ ಗೆ ವಿರೋಧವಾಗಿದ್ದು, ಮಹಿಳೆಯರು ಪುರುಷರೊಂದಿಗೆ ಸಮನಾಗಲು ಸಾಧ್ಯವೇ ಇಲ್ಲ. ಅವರೇನಿದ್ದರೂ, ಮಕ್ಕಳನ್ನು ಹೆರಲು ಮಾತ್ರ ಲಾಯಕ್ಕು ಎಂದು ಕೇರಳದ ಸುನ್ನಿ ಮುಖಂಡ ಎಪಿ ಅಬೂಬಕ್ಕರ್ ಮುಸಲಿಯಾರ್ ಹೇಳಿದ್ದಾರೆ...
ಧಾರ್ಮಿಕ ಮುಖಂಡ ಎಪಿ ಅಬೂಬಕ್ಕರ್ ಮುಸಲಿಯಾರ್ (ಚಿತ್ರಕೃಪೆ: ಫೇಸ್ ಬುಕ್)
ಧಾರ್ಮಿಕ ಮುಖಂಡ ಎಪಿ ಅಬೂಬಕ್ಕರ್ ಮುಸಲಿಯಾರ್ (ಚಿತ್ರಕೃಪೆ: ಫೇಸ್ ಬುಕ್)

ತಿರುವನಂತಪುರ: ಲಿಂಗ ಸಮಾನತೆ ಎಂಬುದು ಇಸ್ಲಾಮ್ ಗೆ ವಿರೋಧವಾಗಿದ್ದು, ಮಹಿಳೆಯರು ಪುರುಷರೊಂದಿಗೆ ಸಮನಾಗಲು ಸಾಧ್ಯವೇ ಇಲ್ಲ. ಅವರೇನಿದ್ದರೂ, ಮಕ್ಕಳನ್ನು ಹೆರಲು ಮಾತ್ರ  ಲಾಯಕ್ಕು ಎಂದು ಕೇರಳದ ಸುನ್ನಿ ಮುಖಂಡ ಎಪಿ ಅಬೂಬಕ್ಕರ್ ಮುಸಲಿಯಾರ್ ಹೇಳಿದ್ದಾರೆ.

ಮದರಾಸಾಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌಜರ್ನ್ಯದ ಕುರಿತು ಇತ್ತೀಚೆಗೆ ಮಹಿಳಾ ಪತ್ರಕರ್ತೆಯೊಬ್ಬರು ಫೇಸ್ ಬುಕ್ ನಲ್ಲಿ ಬರೆದಿದ್ದ ವಿಚಾರದ ಹಿನ್ನಲೆಯಲ್ಲಿ  ಮಾತನಾಡಿದ ಆಲ್ ಇಂಡಿಯಾ ಸುನ್ನಿ ಜಮಾಯತ್ ಉಲಾಮಾ ಸಂಘಟನೆ ಮುಖ್ಯಸ್ಥರು ಕೂಡ ಆಗಿರುವ ಎಪಿ ಅಬೂಬಕ್ಕರ್ ಮುಸಲಿಯಾರ್, ಮಹಿಳೆಯರಿಗೆ ವಿಶ್ವವನ್ನು ಆಳುವ ಅಥವಾ  ನಿಯಂತ್ರಿಸುವ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವಿಲ್ಲ. ಅದು ಕೇವಲ ಪುರುಷರ ಬಳಿ ಮಾತ್ರ ಇದೆ. ಲಿಂಗ ಸಮಾನತೆ ಎಂಬ ಪರಿಕಲ್ಪನೆ ಎಂದಿಗೂ ವಾಸ್ತವವಾಗುವುದಿಲ್ಲ. ಈ ಪರಿಕಲ್ಪನೆ  ಇಸ್ಲಾಂಗೆ ವಿರೋಧವಾಗಿದ್ದು, ಮಾನವೀಯವಾಗಿ ಮತ್ತು ಬೌದ್ಧಿಕವಾಗಿ ಈ ಪರಿಕಲ್ಪನೆ ತಪ್ಪು ಎಂದು ಹೇಳಿದ್ದಾರೆ.

ಕೇರಳದ ಕಲ್ಲಿಕೋಟೆಯಲ್ಲಿ ನಡೆದ ಮುಸ್ಲಿಂ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಸಲಿಯಾರ್, ಮಹಿಳೆ ಎಂದಿಗೂ ಪುರುಷರಿಗೆ ಸಮನಾಗಲು ಸಾಧ್ಯವಿಲ್ಲ. ಬಿಕ್ಕಟ್ಟಿನ  ಸಂದರ್ಭಗಳಲ್ಲಿ ಮಹಿಳೆಯರು ಅದನ್ನು ಎದುರಿಸಲು ಶಕ್ತರಾಗಿರುವುದಿಲ್ಲ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳನ್ನು ಹೆರಲು ಮಾತ್ರ ಶಕ್ತರು ಎಂದು 76 ವರ್ಷದ ಮುಸಲಿಯಾರ್ ಲೇವಡಿ  ಮಾಡಿದ್ದಾರೆ.

ಕೇರಳದ ಕಲ್ಲಿಕೋಟೆ ಮುಸ್ಲಿಂ ಧಾರ್ಮಿಕ ನಾಯಕರಾಗಿರುವ ಎಪಿ ಅಬೂಬಕ್ಕರ್ ಮುಸಲಿಯಾರ್ ಅವರು ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದರು. ಈ ಹಿಂದೆ  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ವಿರೋಧಿಸಿ ಮುಸಲಿಯಾರ್ ಹೇಳಿಕೆ ನೀಡಿದ್ದರು. ಆದರೆ ಆ ಹೇಳಿಕೆಗೆ ಕೇರಳದಲ್ಲಿ ತೀವ್ರ ವಿರೋಧ  ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಇದೀಗ ಮತ್ತೆ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com