
ನವದೆಹಲಿ: ಆಪ್ ಶಾಸಕಿ ಅಲಕಾ ಲಂಬಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಪ್ರಕಾಶ್ ಶರ್ಮಾ ಅವರನ್ನು ಎರಡು ದಿನಗಳ ಕಾಲ ಅಮಾನತು ಮಾಡಿದ್ದನ್ನು ವಿರೋಧಿಸಿರುವ ಬಿಜೆಪಿ ನಾಯಕರು ಸೋಮವಾರ ದೆಹಲಿಯ ರಸ್ತೆಗಳಲ್ಲಿ ಪ್ರತಿಭಟನೆಗಳಿದಿದೆ ಎಂದು ತಿಳಿದುಬಂದಿದೆ.
ಪೂರ್ವ ದೆಹಲಿಯ ಲಕ್ಷ್ಮಿ ನಗರದ ರಸ್ತೆಗಳಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಗಿಳಿದಿದ್ದು, ಪ್ರತಿಭಟನೆಯಿಂದಾಗಿ ರಸ್ತೆಗಳಲ್ಲಿ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ ಎಂದು ತಿಳಿದುಬಂದಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗುತ್ತಿರುವ ನಾಯಕರು ಕೇಜ್ರಿವಾಲ್ ಅವರು ದೆಹಲಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಂದು ಆರೋಪ ವ್ಯಕ್ತಪಡಿಸಿದ್ದಾರೆ. ವಿಶ್ವಾಸನಗರದ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದು, ದೆಹಲಿ ಸದನದಲ್ಲಿ ಪಕ್ಷದ ಅಭ್ಯರ್ಥಿಗೆ ಅವಮಾನಿಸಲಾಗಿದೆ ಎಂದು ಘೋಷಣೆಗಳನ್ನು ಕೂಗಲಾಗುತ್ತಿದೆ.
ದೆಹಲಿ ವಿಧಾನಸಭೆಯಲ್ಲಿ ರಾತ್ರಿ ಆಶ್ರಯವಿಲ್ಲದ ಜನರ ಆಶ್ರಯ ಕುರಿತಂತೆ ನ.23ರಂದು ಗದ್ದಲ ಸೃಷ್ಟಿಯಾಗಿತ್ತು. ಈ ವೇಳೆ ಮನೀಶ್ ಸಿಸೋಡಿಯಾ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಾರ್ಚ್ ನಿಂದ ಅಕ್ಟೋಬರ್ ವರೆಗೆ ದೆಹಲಿಯಲ್ಲಿ 3 ಸಾವಿನ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಇದಕ್ಕುತ್ತರಿಸಿದ ಸಿಸೋಡಿಯಾ ರಾಷ್ಟ್ರಪತಿಯವರ ಆಡಳಿತದ ಅವಧಿಯಲ್ಲಿ ರಾತ್ರಿ ಆಶ್ರಯದ ಜವಾಬ್ದಾರಿ ಭದ್ರತಾ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು ಎಂದು ಪ್ರತಿಪಾದಿಸಿದ್ದರು. ನಂತರ ಆಪ್ ಶಾಸಕಿ ಅಲ್ಕಾ ಲಂಬಾ ಕೂಡ ಚರ್ಚೆಯಲ್ಲಿ ಪಾಲ್ಗೊಂಡರು. ಈ ವೇಳೆ ನಗರದಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿರುವುದು ಕೇವಲ ಚಳಿಯಿಂದ ಮಾತ್ರವೇ ಅಲ್ಲ, ಕೆಲವರು ಮಾದಕ ದ್ರವ್ಯ ಸೇವನೆ ಸಮಸ್ಯೆಯಿಂದಲೂ ಸಾವನ್ನಪ್ಪಿದ್ದಾರೆಂದು ಹೇಳಿದ್ದರು.
ಅಲ್ಕ ಲಂಬಾ ಹೇಳಿಕೆ ನೀಡುತ್ತಿದ್ದಂತೆ ಹೇಳಿಕೆಯನ್ನು ವಿರೋಧಿಸಿ ಬಿಜೆಪಿಯ ಮೂವರು ಶಾಸಕರು ಟೀಕಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಒ.ಪಿ.ಶರ್ಮಾ 'ಯೇ ತೋ ರಾತ್ ಬಾಹರ್ ಘೂಮ್ ನೇ ವಾಲಿ' (ಇವಳು ರಾತ್ರಿಯಿಡೀ ಹೊರಗೆ ಓಡಾಡುವವಳು) ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಆಪ್ ಶಾಸಕರು ಶರ್ಮಾ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ಶರ್ಮಾ ಅವರನ್ನು ದೆಹಲಿ ವಿಧಾನಸಭೆಯಿಂದ ಎರಡು ದಿನಗಳ ಅಮಾನತು ಮಾಡಲಾಗಿತ್ತು.
Advertisement