

ಮುಂಬೈ: ಧಾರ್ಮಿಕ ಪುಸ್ತಕಗಳ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಬದಲು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.
ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸುವುದನ್ನು ಕಡ್ಡಾಯ ಮಾಡುವುದರಿಂದ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದನ್ನು ತಡೆಗಟ್ಟಬಹುದು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. ಎಲ್ಲಾ ಧರ್ಮದವರಿಗೂ ಸಂವಿಧಾನ ಪವಿತ್ರ ಗ್ರಂಥವಾಗಿರಬೇಕು. ಕಾನೂನಿನ ಎದುರು ಎಲ್ಲಾ ಧರ್ಮಗಳೂ ಒಂದೇ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಕೋರ್ಟ್ ಗಳಲ್ಲೂ ಸಹ ಇದೇ ಮಾದರಿಯ ಪದ್ಧತಿ ಜಾರಿಯಾಗಬೇಕು, ನ್ಯಾಯಾಲಗಳಲ್ಲಿ ಹೇಳಿಕೆ ನೀಡುವ ಸಾಕ್ಷಿಗಳು ಧಾರ್ಮಿಕ ಪುಸ್ತಕಗಳ ಬದಲು, ಸಂವಿಧಾನವೇ ಭಾರತದ ಪವಿತ್ರ ಗ್ರಂಥ, ಸಂವಿಧಾನದ ಮೇಲೆ ಪ್ರಮಾಣ ಮಾಡಬೇಕು, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಬದಲಾವಣೆ ಮಾಡುವುದು ಆತ್ಮಹತ್ಯೆಗೆ ಸಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದನ್ನು ಶಿವಸೇನೆ ಉಲ್ಲೇಖಿಸಿದೆ.