ಶಾಲೆಯಲ್ಲಿ ಶುಲ್ಕ ಕಟ್ಟಿಲ್ಲವೆಂದು ಅವಮಾನ: ಆತ್ಮಹತ್ಯೆಗೆ ಶರಣಾದ ಬಾಲಕ

ಶಾಲೆಯಲ್ಲಿ ಶುಲ್ಕಕಟ್ಟಿಲ್ಲವೆಂದು ತನ್ನ ಸಹಪಾಠಿಗಳ ಎದುರಿಗೆ ಹೊಡೆದು ಅವಮಾನಿಸಿದ್ದನ್ನು ಸಹಿಸಲಾಗದ 15 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಯೊಂದು ತೆಲಂಗಾಣದ ಕರೀಂನಗರದಲ್ಲಿ ಗುರುವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ತೆಲಂಗಾಣ: ಶಾಲೆಯಲ್ಲಿ ಶುಲ್ಕಕಟ್ಟಿಲ್ಲವೆಂದು ತನ್ನ ಸಹಪಾಠಿಗಳ ಎದುರಿಗೆ ಹೊಡೆದು ಅವಮಾನಿಸಿದ್ದನ್ನು ಸಹಿಸಲಾಗದ 15 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಯೊಂದು ತೆಲಂಗಾಣದ ಕರೀಂನಗರದಲ್ಲಿ ಗುರುವಾರ ನಡೆದಿದೆ.

ಬಾಲಕನ ತಂದೆ ರೈತನಾಗಿದ್ದು, ಕಡುಬಡತನದ ಕುಟುಂಬ ಇವರದಾಗಿದೆ. ಬಾಲಕ ಕರೀನಗರದ ಶಾಲೆಯಲ್ಲಿ 10 ತರಗತಿ ಓದುತ್ತಿದ್ದು, ಈ ಮೊದಲೇ 5 ಸಾವಿರ ಶುಲ್ಕವನ್ನು ಶಾಲೆಯಲ್ಲಿ ಪಾವತಿಸಿದ್ದಾರೆ. ಆದರೆ, ಇನ್ನುಳಿದ ಶುಲ್ಕವನ್ನು ಪಾವತಿಸಲು ಸಾಧ್ಯವಾಗಿಲ್ಲ. ಉಳಿದ ಶುಲ್ಕ ಪಾವತಿಸುವಂತೆ ಶಾಲೆಯ ಪ್ರಾಂಶುಪಾಲರು ಹಲವು ಬಾರಿ ಹೇಳಿದರೂ ಶುಲ್ಕ ಪಾವತಿಸಿಲ್ಲ ಎಂದು ಕೆಂಡಾಮಂಡಲಗೊಂಡಿರುವ ಶಾಲೆಯ ಪ್ರಾಂಶುಪಾಲರು,. ಬಾಲಕನಿಗೆ ಆತನ ಸಹಪಾಠಿಗಳ ಎದುರಿಗೆ ಹೊಡೆದು ಕ್ಲಾಸ್ ರೂಮಿನಿಂದ ಹೊರಗೆ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಬಾಲಕನೊಂದಿಗೆ ಇದೇ ರೀತಿಯಾಗಿ 6 ವಿದ್ಯಾರ್ಥಿಗಳು ಶಿಕ್ಷೆ ನೀಡಲಾಗಿದೆ.

ಪ್ರಾಂಶುಪಾಲರು ಮಾಡಿದ ಈ ಅವಮಾನಕ್ಕೆ ತೀವ್ರವಾಗಿ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಹೀಗಾಗಿ ಮಧ್ಯಾಹ್ನದ ಊಟದ ಸಮಯದಲ್ಲಿ ಶಾಲೆಯಿಂದ ಮನೆಗೆ ಬರುವಾಗ ಸಂಬಂಧಿಯೊಬ್ಬನ ಬಳಿ ಮೊಬೈಲ್ ಫೋನ್ ಪಡೆದ ಬಾಲಕ ತನ್ನ ನೋವು ಹಾಗೂ ಅವಮಾನವನ್ನು ಮೊಬೈನ್ ನಲ್ಲಿ ವೀಡಿಯೋ ಮಾಡಿದ್ದಾನೆ. ನಂತರ ತನ್ನನ್ನು ಹುಡುಕುವುದಕ್ಕೂ ಮೊದಲು ಈ ವೀಡಿಯೋವನ್ನು ನೋಡುವಂತೆ ಮನೆಯ ಟಿವಿ ಬಳಿ ಚೀಟಿ ಬರೆದಿಟ್ಟು, ಪೆದ್ದಪಲ್ಲಿ ಬಳಿಯಿರುವ ರೈಲ್ವೆ ಹಳಿಯ ಬಳಿ ಹೋಗಿ ರೈಲಿಗೆ ತಲೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾತ್ರಿಯಾದರೂ ಮನೆಗೆ ಬಾರದಿರುವುದರಿಂದ ಗಾಬರಿಗೊಂಡ ಪೋಷಕರು ನಂತರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಮನೆಗೆ ಬಂದ ನಂತರ ಪೋಷಕರಿಗೆ ಬಾಲಕ ಬರೆದಿಟ್ಟ ಚೀಟಿ ದೊರಕಿದೆ.

ಪೋಷಕರು ನೀಡಿದ ದೂರಿನ ಅನ್ವಯ ಹುಡುಕಾಟ ನಡೆಸಿದ ಪೊಲೀಸರಿಗೆ ಪೆದ್ದಪಲ್ಲಿ ಬಳಿಯಿರುವ ರೈಲ್ವೆ ಹಳಿಯ ಬಳಿ ಬಾಲಕನ ಶವ ದೊರಕಿದೆ. ನಂತರ ಪೋಷಕರು ಬಾಲಕ ಚೀಟಿ ಹಾಗೂ ವೀಡಿಯೋ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಶಾಲೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com