
ವಿಶ್ವಸಂಸ್ಥೆ: ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವುದು ಭಾರತವೇ ಹೊರತು ನಾವಲ್ಲ. ತೆಹ್ರೀಕ್ಎ ತಾಲಿಬಾನ್ ಮೂಲಕ ಭಾರತವೇ ನಮ್ಮ ನೆಲದಲ್ಲಿ ಉಗ್ರವಾದಕ್ಕೆ ಬೆಂಬಲ ನೀಡುತ್ತಿದೆ ಎಂದು ಹೇಳುವ ಮೂಲಕ ಪಾಕಿಸ್ತಾನ ಹೊಸ ರಗಳೆ ತೆಗೆದಿದೆ.
ಈ ಸಂಬಂಧ ತನ್ನ ಬಳಿ ಸಾಕ್ಷ್ಯಾಧಾರಗಳೂ ಇವೆ ಎಂದು ಹೇಳಿಕೊಂಡಿರುವ ಪಾಕಿಸ್ತಾನ, ಅದನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಒಪ್ಪಿಸಿದ್ದಾಗಿಯೂ ಹೇಳಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಗುರುವಾರ ರಾತ್ರಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಭಾಷಣಕ್ಕೆ ಪ್ರತಿಕ್ರಿಯೆ ನೀಡುವ ಹಕ್ಕನ್ನು ಬಳಸಿಕೊಂಡು ಈ ಸಾಕ್ಷ್ಯಾಧಾರಗಳನ್ನು ಒಪ್ಪಿಸಿದ್ದಾಗಿ ತಿಳಿಸಿದೆ. ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನವಾಜ್ ಷರೀಫ್ ಕಾಶ್ಮೀರ ವಿವಾದವನ್ನು ಮುಂದಿಟ್ಟುಕೊಂಡು ಭಾರತದ ಮೇಲೆ ಮಾಡಿದ್ದ ಆರೋಪಕ್ಕೆ ಸುಷ್ಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಎರಡೂ ದೇಶಗಳ ನಡುವಿನ ಬಿಕ್ಕಟ್ಟು ನಿವಾರಣೆಗೆ ಷರೀಫ್ ವಿಶ್ವಸಂಸ್ಥೆ ಮುಂದಿಟ್ಟಿದ್ದ ನಾಲ್ಕು ಸೂತ್ರಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು. ನಾಲ್ಕು ಸೂತ್ರಗಳು ಬೇಡ, ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ನಿಲ್ಲಿಸುವ ಒಂದೇ ಒಂದು ಸೂತ್ರ ಎರಡೂ ದೇಶಗಳ ನಡುವಿನ ಸಮಸ್ಯೆ ಪರಿಹರಿಸಬಲ್ಲುದು ಎಂದು ಹೇಳಿದ್ದರು. ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಪಾಕಿಸ್ತಾನ ಈಗ `ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರ'ದ ಪಟ್ಟವನ್ನು ಭಾರತದ ಮೇಲೆ ಕಟ್ಟಲು ಹೊರಟಿದೆ. ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ಭಯೋತ್ಪಾದನೆಗೆ ಭಾರತದ ಭದ್ರತೆ ಹಾಗೂ ಗುಪ್ತಚರ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿವೆ. ಭಯೋತ್ಪಾದನೆಯ ಗುಮ್ಮನನ್ನು ಮುಂದಿಟ್ಟುಕೊಂಡು ಭಾರತವು ದ್ವಿಪಕ್ಷೀಯ ಮಾತುಕತೆಗೆ ಅಡ್ಡಿ ಮಾಡುತ್ತಿರುವುದಲ್ಲದೆ ಎರಡೂ ದೇಶಗಳ ನಡುವಿನ ಸೌಹಾರ್ದ ವಾತಾವರಣವನ್ನೂ ಹಾಳುಗೆಡವುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಎರಡೂ ದೇಶಗಳ ಮಾತುಕತೆಯಲ್ಲಿ ಜಮ್ಮಕಾಶ್ಮೀರ ವಿವಾದವೇ ಪ್ರಮುಖ ವಿಚಾರ. ಆದರೆ, ಭಾರತ ಒಂದೇ ಅಜೆಂಡಾ ಇಟ್ಟುಕೊಂಡು ಮಾತುಕತೆಗೆ ಆಗ್ರಹಿಸುತ್ತಿದೆ. ನೈಜ ಮಾತುಕತೆಗೆ ಸಂಬಂಧಿಸಿ ಭಾರತ ಗಂಭೀರವಾಗಿಲ್ಲೇ ಇಲ್ಲ. ಜತೆಗೆ, 2007ರ ಸಂಜೋತಾ ಎಕ್ಸ್‍ಪ್ರೆಸ್ ರೈಲು ಸ್ಫೋಟದಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸುವಂತೆಯೂ ಮನವಿ ಮಾಡಿದೆ.
Advertisement