ಭಾರತ ನಾಶಕ್ಕೆ ಪಿಒಕೆಯಲ್ಲಿ ಉಗ್ರ ಶಿಬಿರ: ಮಹತ್ವದ ದಾಖಲೆಗಳು ಲಭ್ಯ

ವಿಶ್ವಸಂಸ್ಥೆಯಲ್ಲಿ ಉಗ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕುಟಿಲತೆ ಮತ್ತೊಮ್ಮೆ ಸಾಬೀತಾಗಿದ್ದು, ಭಾರತ ನಾಶಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಕುರಿತು ಮಹತ್ವದ ದಾಖಲೆಗಳು ಲಭ್ಯವಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಉಗ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕುಟಿಲತೆ ಮತ್ತೊಮ್ಮೆ ಸಾಬೀತಾಗಿದ್ದು, ಭಾರತ ನಾಶಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಕುರಿತು ಮಹತ್ವದ ದಾಖಲೆಗಳು ಲಭ್ಯವಾಗಿವೆ.

ಪಾಕಿಸ್ತಾನದ ಇಸಿಎಸ್ ಸಂಸ್ಥೆ ಪಾಕ್ ಆಕ್ರಮಿತ ಕಾಶ್ಮೀರದ ಖೈಬರ್ ಪಕ್ತುಂಕ್ವಾ ಮತ್ತು ಗಿಲ್ಗಿಟ್-ಬಲ್ತಿಸ್ತಾನ್ ಪ್ರದೇಶಗಳಲ್ಲಿ ಭಯೋತ್ಪಾದನೆಯನ್ನು ಬೆಳೆಸಲು ಪಿತೂರಿ ನಡೆಸುತ್ತಿದೆ ಎಂಬ ವಿಷಯ ಬಹಿರಂಗಗೊಂಡಿದೆ. ಭಯೋತ್ಪಾದಕರು ಇಸಿಎಸ್ ಮತ್ತು ಪಾಕಿಸ್ತಾನ ಸರ್ಕಾರದ ನೆರವಿನೊಂದಿಗೆ ತರಬೇತಿ ಪಡೆದು ಭಾರತದ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಈ ಬಗ್ಗೆ ಬಲವಾದ ದಾಖಲೆಗಳು ಸಿಕ್ಕಿವೆ ಎಂದು ಪತ್ರಿಕೆ ಹೇಳಿಕೊಂಡಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ -ಇ-ತಯ್ಯಬಾ ಮತ್ತು ಹಿಜ್ ಬುಲ್ ಮುಜಾಹಿದ್ದೀನ್ ಗೆ ತಾಂತ್ರಿಕ ನೆರವನ್ನು ನೀಡುತ್ತಿವೆ. ಈ ಭಯೋತ್ಪಾದಕರು ಅನೇಕ ಬಾರಿ ಪಾಕಿಸ್ತಾನದ ವಿರುದ್ಧವೇ ತಿರುಗಿ ಬಿದ್ದರೂ ಸಹ ಅದಕ್ಕೆ ಬುದ್ದಿ ಬಂದಂತಿಲ್ಲ. ಭಾರತದ ವಿರುದ್ಧ ಹೋರಾಡಲು ಮಾತ್ರ ಸಹಾಯ ಮಾಡುತ್ತದೆ.

ಪಾಕ್ ಆಕ್ರಮಿತ ಕಾಶ್ಮೀರ ಕುರಿತು ಭಾರತ-ಪಾಕಿಸ್ತಾನ ಮಧ್ಯೆ ಸಂಘರ್ಷ ಮುಂದುವರಿಯುತ್ತಲೇ ಇದೆ. ಶನಿವಾರ ಲಂಡನ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಕುರಿತ ತಮ್ಮ "ವಾಸ್ತವ ಮತ್ತು ಜವಾಬ್ದಾರಿಯುತ' ಸಲಹೆ ಯನ್ನು ಒಪ್ಪದೇ ಭಾರತಕ್ಕೆ ಬೇರೆ ಗತಿಯೇ ಇಲ್ಲ. ಪಾಕಿಸ್ತಾನದ ವಿರುದ್ಧ ಉಗ್ರರನ್ನು ಎತ್ತಿಕಟ್ಟುವುದನ್ನು ಭಾರತ ನಿಲ್ಲಿಸಬೇಕು. ಇದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ್ದರು. ಅಂದರೆ ಭಯೋತ್ಪಾದನೆಗೆ ಪಾಕಿಸ್ತಾನವೇ ಕುಮ್ಮಕ್ಕು ನೀಡುತ್ತಿರುವುದು ಎಂದು ಮತ್ತೊಮ್ಮೆ ಸಾಬೀತಾಗಿದೆ.

ಈ ಬಗ್ಗೆ ಮೊನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ವೇದಿಕೆಯಾದ ವಿಶ್ವಸಂಸ್ಥೆಯಲ್ಲಿ ಹೇಳಿದ್ದರೂ ಪಾಕಿಸ್ತಾನ ಒಪ್ಪಲು ತಯಾರಿಲ್ಲ. ಈ ಬಗ್ಗೆ ಭಾರತದ ಬಳಿ ಹೊಸ ಸಾಕ್ಷ್ಯಾಧಾರಗಳು ಲಭ್ಯವಿದೆ. ಇದರ ಜೊತೆಗೆ  ನರೇಂದ್ರ ಮೋದಿಯವರ ಆಡಳಿತದ ಪ್ರಭಾವವೀಗ ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆಯಾಗಿ ಮೊಳಗಿದೆ. ಅದೇನೆಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುತ್ತಿರುವ ಜನರೀಗ ತಮ್ಮನ್ನು ಭಾರತಕ್ಕೆ ಸೇರಿಸಿ ಎಂದು ಮೊರೆಯಿಟ್ಟಿದ್ದಾರೆ.

2015ರ ಭೂಕಂಪ ಮತ್ತು 2014ರಲ್ಲಿ ಸಂಭವಿಸಿದ ಪ್ರವಾಹದ ವೇಳೆ ಭಾರತ ಸರ್ಕಾರ ನೀಡಿದ ನೆರವಿಗೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆ ಅಭಾರಿಯಾಗಿದೆ.  ಭಾರತ ಸರ್ಕಾರದ ಈ ಕಾರ್ಯಗಳು ಅಲ್ಲಿನ ಜನತೆಯಲ್ಲಿ ಹೊಸ ಆಶಾಕಿರಣಗಳನ್ನೂ ಹುಟ್ಟು ಹಾಕಿವೆ. ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದ ಅಂಜುಮಾನ್ ಮಿನ್‌ಹಾಜ್ ಇ ರಸೂಲ್  ಅಧ್ಯಕ್ಷ ಮೌಲಾನಾ ಸಯ್ಯದ್ ಅಥರ್ ಹುಸೈನ್ ದೆಹ್ಲವಿ ಅಲ್ಲಿನ ಜನರಿಗೆ ಭಾರತಕ್ಕೆ ಸೇರುವ ಇಚ್ಛೆಯಿದೆ ಎಂದು ಹೇಳಿರುವುದಾಗಿ ಉಲ್ಲೇಖಿಸಿದ್ದಾರೆ.

ಪಾಕಿಸ್ತಾನದಲ್ಲಿ ಉಲ್ಬಣಗೊಳ್ಳುತ್ತಿರುವ ಭಯೋತ್ಪಾದನೆಯಿಂದ ಅಲ್ಲಿನ ಜನರು ರೋಸಿ ಹೋಗಿದ್ದಾರೆ. ಅವರೀಗ ಶಾಂತಿಯುತವಾಗಿ ಬದಕಲು ಹಂಬಲಿಸುತ್ತಿದ್ದು, ಭಾರತಕ್ಕೆ ಸೇರಲು ಇಚ್ಛೆ ವ್ಯಕ್ತ ಪಡಿಸುತ್ತಿದ್ದಾರೆ ಎಂದು ದೆಹ್ಲವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com