
ನವದೆಹಲಿ: ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮಹಮೂದ ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಾಲಿವುಡ್ ನಟ ನಾಸಿರುದ್ದೀನ್ ಶಾ, ತಾವು ಮುಸ್ಲಿಂ ಧರ್ಮೀಯನಾಗಿದ್ದರಿಂದ ಗುರಿಯಾಗಿಸಿಕೊಂಡುರು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮಹಮೂದ ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಾಸಿರುದ್ದೀನ್ ಶಾ ಭಾಗವಹಿಸಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಶಾ ಕಿಡಿಕಾರಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ನಾಸಿರುದ್ದೀನ್ ಶಾ ಅವರು, "ನನ್ನ ಹೆಸರು ನಾಸಿರುದ್ದೀನ್ ಶಾ, ಇದೇ ಕಾರಣಕ್ಕಾಗಿ ನಾನ್ನನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ನನಗೆ ಧಾರ್ಮಿಕವಾಗಿ ಇಲ್ಲಿಯವರೆಗೂ ನನ್ನ ಬಗ್ಗೆ ಅರಿವಿರಲಿಲ್ಲ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಾನು ನೀಡಿದ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡಿದ್ದಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ತಪ್ಪು-ತಪ್ಪಾಗಿ ವರದಿಗಳ ಬಿತ್ತರಿಸಲಾಗುತ್ತಿದೆ".
"ನನ್ನ ಹೇಳಿಕೆಗಳನ್ನು ಭಾರತ-ವಿರೋಧಿ ಹೇಳಿಕೆಗಳೆಂದು ಬಿಂಬಿಸುತ್ತಿರುವುದನ್ನು ನೋಡಿ ನಾನು ಬೆರಗಾಗಿದ್ದೇನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ತಮ್ಮ ಹೇಳಿಕೆಗಳನ್ನು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ತನ್ನ ಹೇಳಿಕೆಗಳನ್ನು ಮಾತ್ರ ದೇಶ ವಿರೋಧಿ ಹೇಳಿಕೆಗಳೆಂದು ಬಿಂಬಿಸಲಾಗುತ್ತಿದೆ. ಪಾಕಿಸ್ತಾನದ ಪರ ಹೇಳಿದ ಹೇಳಿಕೆಗಳನ್ನು ಭಾರತ ವಿರೋಧಿ ಹೇಳಿಕೆಗಳೆಂದು ಪರಿಗಣಿಸಲಾಗುತ್ತಿದೆ. ನಾನು ಪಾಕ್ ಕ್ರಿಕೆಟಿಗ ಇಮ್ರಾನ್ ಖಾನ್ ರನ್ನು ಅದ್ಭುತವಾಗಿ ಆಡುತ್ತಾರೆ ಎಂದು ಹೇಳಿದರೆ, ಸುನಿಲ್ ಗಾವಸ್ಕರ್ ಕೆಟ್ಟದಾಗಿ ಆಡುತ್ತಾರೆ ಎಂದು ಅರ್ಥವಲ್ಲ".
"ನಾನು ಭಾರತೀಯ ಮತ್ತು ಅದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನನ್ನ ದೇಶಪ್ರೇಮವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಶಾ ಹೇಳಿದರು. ಅಲ್ಲದೇ ಶಿವಸೇನೆ ಹೇಳಿಕೆ ಕುರಿತಂತೆ ಮಾತನಾಡಿದ ಶಾ, ಭಯೋತ್ಪಾದನೆಯನ್ನು ಪ್ರಸಾರ ಮಾಡುವ ವ್ಯಕ್ತಿಗಳು ಮತ್ತು ಗಡಿಯಾಚೆಗೆ ಶಾಂತಿ ಸಂದೇಶ ಸಾರುವ ವ್ಯಕ್ತಿಗಳು ಇಬ್ಬರೂ ಒಂದೇ ಅಲ್ಲ. ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ನಾಸಿರುದ್ದೀನ್ ಶಾ ಹೇಳಿದರು.
ಕಳೆದ ವಾರ ಮುಂಬೈನಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರ ಆಪ್ತ ಸುಧೀಂದ್ರ ಕುಲಕರ್ಣಿ ಅವರು ಆಯೋಜಿಸಿದ್ದರು. ಇದನ್ನು ವಿರೋಧಿಸಿದ್ದ ಶಿವಸೇನೆ ಕಾರ್ಯಕರ್ತರು, ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಮಸಿ ಸುರಿಯುವ ಮೂಲಕ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಕಾರ್ಯಕ್ರಮಕ್ಕೆ ವಿಶೇಷ ಅಥಿತಿಯಾಗಿ ಆಗಮಿಸಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧವೂ ಟೀಕಾಪ್ರಹಾರಗಳು ಹರಿದಾಡಿದ್ದವು.
Advertisement