ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಲ್ಲ: ಸಿಎಂ ಖಟ್ಟರ್ ಸ್ಪಷ್ಟನೆ
ಚಂಡೀಗಢ: ಮುಸ್ಲಿಮರು ಭಾರತದಲ್ಲಿರಬೇಕೆಂದರೆ ಗೋಮಾಂಸ ಸೇವನೆ ಬಿಡಬೇಕೆ ಎಂದು ಹೇಳಿದ್ದೆನೇ ವಿನಃ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಎಂದಿಗೂ ಹೇಳಿಲ್ಲ ಎಂದು ಹೇಳುವ ಮೂಲಕ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಈ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ. ಪ್ರಧಾನಮಂತ್ರಿ ಅವರೂ ಸಹ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಅಥವಾ ಅವರ ಸಂಸ್ಕೃತಿಗೆ ಧಕ್ಕೆಯುಂಟಾಗಿದ್ದರೆ ಅದನ್ನು ಸರಿಪಡಿಸಲು ಕಾನೂನು ಇದ್ದು, ಕಾನೂನನ್ನು ಕೈತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದರು. ಈ ರೀತಿಯಲ್ಲೇ ನಾನು ಸಹ ಹೇಳಿಕೆಯನ್ನು ನೀಡಿದ್ದೆ. ನನ್ನ ಮಾತು ಹಾಗೂ ಪದದಿಂದ ಯಾರಿಗಾದರೂ ನೋವಾಗಿದ್ದರು ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ಪತ್ರಿಯೊಂದು ನಡೆಸಿದ ಸಂದರ್ಶದಲ್ಲಿ ಮಾತನಾಡಿದ್ದ ಖಟ್ಟರ್ ಅವರು, ಭಾರತದಲ್ಲಿ ಗೋಮಾತೆ ವಿಶೇಷ ಸ್ಥಾನವಿದೆ. ಗೋವನ್ನು ನಾವು ಪೂಜಿಸುತ್ತೇವೆ. ಹಾಗಾಗಿ ಭಾರತದಲ್ಲಿ ಮುಸ್ಲಿಮರು ನೆಲೆಸಬೇಕೆಂದರೆ ಮೊದಲು ಗೋಮಾಂಸ ಸೇವನೆಯನ್ನು ಬಿಡಬೇಕು. ಗೋಮಾಂಸ ಸೇವನೆ ಮಾಡಲಿಲ್ಲ ಎಂದಾಕ್ಷಣ ಅವರನ್ನು ಮುಸ್ಲಿಮರಲ್ಲ ಎಂದು ಯಾರೂ ಕರೆಯುವುದಿಲ್ಲ. ಗೋಮಾಂಸ ತಿಂದರೆ ಮಾತ್ರವೇ ಅವರು ಮುಸ್ಲಿಮರಾಗಲು ಸಾಧ್ಯ ಎಂದು ಎಲ್ಲಿಯೂ ಬರೆದಿಲ್ಲ ಎಂದು ಹೇಳಿದ್ದಾರೆ.
ದಾದ್ರಿ ಪ್ರಕರಣ ಸಂಬಂಧ ದೇಶದಲ್ಲಿ ತಪ್ಪು ಕಲ್ಪನೆಗಳು ಸೃಷ್ಟಿಯಾಗುತ್ತಿವೆ. ದಾದ್ರಿ ಪ್ರಕರಣ ನಡೆದಿದ್ದು ಎರಡು ಸಮುದಾಯಗಳ ನಡುವೆ ತಪ್ಪು ತಿಳುವಳಿಕೆಯುಂಟಾದ್ದರಿಂದ. ಈ ರೀತಿಯ ಘಟನೆ ನಡೆಯಬಾರದಿತ್ತು. ಗೋ ಹತ್ಯೆ ಎಂಬುದು ಇಲ್ಲಿನ ಜನರ ಮನಸ್ಸಿಗೆ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಹಾಗೆಂದು ಅಖ್ಲಾಕ್ ಕೊಂದಿದ್ದು ಸರಿಯೆಂದು ಅಲ್ಲ. ಒಬ್ಬ ಮನುಷ್ಯನ ಮೇಲೆ ದಾಳಿ ಮಾಡುವುದು. ಆತನನ್ನು ಹತ್ಯೆ ಮಾಡುವುದೂ ತಪ್ಪು. ದಾದ್ರಿ ಪ್ರಕರಣ ನಡೆಯಲು ಪ್ರಮುಖರಾದ ಆರೋಪಿಗಳಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದರು.
ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ದೇಶದೆಲ್ಲೆಡೆ ವ್ಯಾಪಕ ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. ರಾಜಕೀಯ ವಲಯದ ಕೆಲವು ನಾಯಕರು ಖಟ್ಟರ್ ಅವರ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದು, ಖಟ್ಟರ್ ಅವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹಲವು ವಿರೋಧಗಳನ್ನು ವ್ಯಕ್ತಪಡಿಸಿದ್ದರು.
ಮತ್ತೆ ಕೆಲವು ನಾಯಕರು ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಜವಾಬ್ದಾರಿ ಹೊತ್ತಿರುವ ಒಬ್ಬ ನಾಯಕ ಈ ರೀತಿಯ ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯ. ಮುಖ್ಯಮಂತ್ರಿ ಸ್ಥಾನಕ್ಕೆ ಖಟ್ಟರ್ ಲಾಯಕ್ಕಲ್ಲ ಎಂದು ಟೀಕೆ ವ್ಯಕ್ತಪಡಿಸಿದ್ದರು.
ಆಮ್ ಆದ್ಮಿ ಪಕ್ಷದ ನಾಯಕ ಆಶುತೋಶ್ ಖಟ್ಟರ್ ಅವರ ಪ್ರತಿಕ್ರಿಯೆ ಟ್ವಿಟರ್ ನಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಖಟ್ಟರ್ ಅವರು ಹರಿಯಾಣದ ಮುಖ್ಯಮಂತ್ರಿ. ಖಟ್ಟರ್ ಎಂಬ ಪದ ಅವರ ಹೆಸರಿನಲ್ಲೇ ಇದೆ. ಆದರೆ, ಸಂವಿಧಾನದ ಬಗ್ಗೆಯೇ ಅವರಿಗೆ ತಿಳುವಳಿಕೆಯಿಲ್ಲ. ಅವರಿಗೆ ಆರ್ ಎಸ್ಎಸ್ ಪುಸ್ತಕ ಓದುವುದಷ್ಟೇ ಗೊತ್ತಿದೆ. ಅವರ ತಿಳುವಳಿಕೆ ಹಾಗೂ ಬುದ್ಧಿವಂತಿಕೆ ಬಗ್ಗೆ ಕರುಣೆ ಬರುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ