ಹಿಟ್ಲರ್‌ಗೆ ಗಾಂಧಿ ಪಾಠ

ಹಿಂಸೆಯ ಪ್ರಚೋದಕನಿಗೆ ಅಹಿಂಸೆಯ ಪ್ರತಿಪಾದಕನಿಂದ ಹೋಗಿತ್ತೊಂದು ಪತ್ರ!..
ಮಹಾತ್ಮ ಗಾಂಧಿ ಮತ್ತು ಅಡಾಲ್ಫ್ ಹಿಟ್ಲರ್ (ಸಂಗ್ರಹ ಚಿತ್ರ)
ಮಹಾತ್ಮ ಗಾಂಧಿ ಮತ್ತು ಅಡಾಲ್ಫ್ ಹಿಟ್ಲರ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಹಿಂಸೆಯ ಪ್ರಚೋದಕನಿಗೆ ಅಹಿಂಸೆಯ ಪ್ರತಿಪಾದಕನಿಂದ ಹೋಗಿತ್ತೊಂದು ಪತ್ರ!

ಹೌದು. ಯುರೋಪ್ ಯುದ್ಧಕ್ಕೆ ರಣಕಹಳೆ ಊದಿದ್ದ ಜರ್ಮನಿ ಸರ್ವಾಧಿಕಾರಿ ಅಡಾಲ್ ಹಿಟ್ಲರ್‌ಗೆ ಶಾಂತಿಮಂತ್ರ ಭೋದಿಸಿ, ಮಹಾತ್ಮ ಗಾಂಧಿ ಪತ್ರಗಳನ್ನು ಬರೆದಿದ್ದರಂತೆ. ೧೯೩೯ರಿಂದ ೧೯೪೦ರವರೆಗೆ ಗಾಂಧಿಜಿ ಅವರು ಹಿಟ್ಲರ್‌ಗೆ ಸರಣಿ ಪತ್ರಗಳನ್ನು ಬರೆದಿದ್ದು, ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರು. ಶಾಂತಿಯ ಹಾದಿಯನ್ನು ಹಿಡಿಯಿರಿ ಎಂದು ಕೋರಿಕೊಳ್ಳುವುದರ  ಜೊತೆಗೆ, ಮಹಾತ್ಮನು ಹಿಟ್ಲರ್‌ಗೆ ನಿಷ್ಠುರ ನುಡಿಗಳ ಮೂಲಕ ಬುದ್ಧಿಮಾತು ಹೇಳಿದ್ದರು. ಅಷ್ಟೇ ಅಲ್ಲ, ಅಹಿಂಸಾತ್ಮಕ ರೂಪದಲ್ಲಿ ಹಿಟ್ಲರ್ ಹಾಗೂ ಇಟಲಿಯ ಬೆನಿಟೋ ಮುಸೊಲಿನಿ ವಿರುದ್ಧ  ಹೋರಾಡಿ ಎಂದು ಬ್ರಿಟನ್ ಜನತೆಗೂ ಸೂಚಿಸಿದ್ದರು. ಒಟ್ಟಿನಲ್ಲಿ ಎರಡನೇ ವಿಶ್ವಯುದ್ಧವನ್ನು ತಡೆಯಲು ಅವರು ತನ್ನಿಂದಾದ ಪ್ರಯತ್ನ ಮಾಡಿದ್ದರು ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿ  ಮಾಡಿದೆ.

ಪತ್ರದಲ್ಲೇನಿತ್ತು? ಒಲವಿನ ಗೆಳೆಯನೇ, ನಾನು ಔಪಚಾರಿಕವಾಗಿ ಮಿತ್ರನೆಂದು ಸಂಬೋಧಿಸಿದ್ದಲ್ಲ.  ನನಗ್ಯಾರೂ ಶತ್ರುಗಳಿಲ್ಲ, ಎಲ್ಲರೂ ಮಿತ್ರರೇ. ಕಳೆದ ೩೩ ವರ್ಷಗಳಿಂದಲೂ ನಾನು, ಇಡೀ ಮಾನವಕುಲದೊಂದಿಗೆ ಎಲ್ಲ ಜನಾಂಗ, ವರ್ಣ, ಜಾತಿಯನ್ನೂ ಮೀರಿ ಸ್ನೇಹ ಬೆಳೆಸುವುದೇ ನನ್ನ ಕೆಲಸವೆಂದು ಭಾವಿಸಿದ್ದೇನೆ. ನಿಮ್ಮ ಧೈರ್ಯ ಹಾಗೂ ತಾಯಿನಾಡಿನ ಮೇಲಿನ ಪ್ರೀತಿಯ ಬಗ್ಗೆ ನಮಗೆ ಎಳ್ಳಷ್ಟೂ ಅನುಮಾನವಿಲ್ಲ. ನಿಮ್ಮ ವಿರೋಧಿಗಳು ಕರೆಯುವಂತೆ ನಿಮ್ಮನ್ನು ‘ರಾಕ್ಷಸ’ ನೆಂದೂ ನಾವು ಕರೆಯುವುದಿಲ್ಲ. ಆದರೆ, ನಿಮ್ಮ ಬರಹಗಳು ಹಾಗೂ ಘೋಷಣೆಗಳು ರಾಕ್ಷಸ ರೂಪಿಯಾಗಿದ್ದು, ಮಾನವ ಘನತೆಗೆ ತಕ್ಕುದಲ್ಲ. ಇಲ್ಲಿ ನಿಮ್ಮ ಶಸ್ತ್ರಾಸ್ತ್ರಗಳಿಗೆ ಯಶಸ್ಸು ಸಿಗಲಿ ಎಂದು ನಾವು ಖಂಡಿತಾ ಆಶಿಸಲಾರೆವು.

ಬ್ರಿಟಿಷರ ವಿರುದ್ಧ ನಾವೂ ಹೋರಾಡುತ್ತಿದ್ದೇವೆ. ಅವರನ್ನು ಸೋಲಿಸಲಲ್ಲ, ಬದಲಿಗೆ ಪರಿವರ್ತಿಸಲು. ನಮ್ಮದು ಶಸ್ತ್ರವಿಲ್ಲದ ಹೋರಾಟ. ಜರ್ಮನಿಯ ಸಹಾಯದಿಂದ ಬ್ರಿಟಿಷರ ಆಡಳಿತ ಕೊನೆಗೊಳ್ಳಬೇಕೆಂದು ನಾವು ಎಂದಿಗೂ ಬಯಸುವುದಿಲ್ಲ. ನಾವು ಅಹಿಂಸಾತ್ಮಕ ಶಕ್ತಿಯನ್ನು ಹೊಂದಿದ್ದೇವೆ. ಅದು ವಿಶ್ವದ ಎಲ್ಲ ಹಿಂಸಾತ್ಮಕ ಶಕ್ತಿಯನ್ನು ಮೆಟ್ಟಿ ನಿಲ್ಲುವಂಥದ್ದು. ನಾನೀಗಾಗಲೇ  ಹೇಳಿರುವಂತೆ, ಅಹಿಂಸೆಯ ಮಾರ್ಗದಲ್ಲಿ, ಸೋಲು ಎಂಬುದೇ ಇಲ್ಲ. ಇದು ಯಾರನ್ನೂ ಕೊಲ್ಲದೇ, ಯಾರಿಗೂ ನೋವುಂಟು ಮಾಡದೇ, ಕೇವಲ ‘ಮಾಡು ಇಲ್ಲವೇ ಮಡಿ’ ಎಂಬ  ಪ್ರಕ್ರಿಯೆಯಾಗಿದೆ. ಇದನ್ನು ಯಾವುದೇ ಹಣವಾಗಲೀ, ನೀವೇ ಅನುಷ್ಠಾನಕ್ಕೆ ತಂದಿರುವ ವಿನಾಶದ ವಿeನದ ನೆರವಾಗಲೀ ಇಲ್ಲದೇ ಪ್ರಾಕ್ಟಿಕಲ್ ಆಗಿ ಬಳಸಬಹುದು.

ಶಾಂತಿಯ ಮಾರ್ಗದಲ್ಲಿ ನಡೆಯಿರಿ, ಇಲ್ಲದಿದ್ದರೆ ಒಂದಲ್ಲ ಒಂದು ದಿನ ಯಾರಾದರೂ ಒಬ್ಬರು ನಿಮ್ಮನ್ನು ನಿಮ್ಮದೇ ಅಸ್ತ್ರದಿಂದ ನಾಶಮಾಡುವರು. ಜನರು ಹೆಮ್ಮೆ ಪಟ್ಟುಕೊಳ್ಳುವಂತಹ ಯಾವ  ಕೆಲಸವನ್ನೂ ಮಾಡದೇ ನೀವು ಜನಮಾನಸದಿಂದ ಮರೆಯಾಗುತ್ತೀರಿ. ನಮ್ಮ ಮನವಿ ಏನೆಂದರೆ, ಮಾನವತೆಯ ಹೆಸರಲ್ಲಾದರೂ ಯುದ್ಧವನ್ನು ನಿಲ್ಲಿಸಿ. ನೀವು ಇದರಿಂದ ಏನನ್ನೂ  ಕಳೆದುಕೊಳ್ಳಲಾರಿರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com