ಡ್ರೈವಿಂಗ್ ವೇಳೆ ಕೈಗೆ ಬಂದ ಬಸ್ ಸ್ಟೀರಿಂಗ್: ತಪ್ಪಿದ ಭಾರಿ ಅನಾಹುತ

ನೆರೆಯ ಆಂಧ್ರ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದನ್ನು ಬಸ್ ಚಾಲಕನೋರ್ವ ತನ್ನ ಚಾಕಚಕ್ಯತೆಯಿಂದಾಗಿ ತಪ್ಪಿಸಿದ್ದಾನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಮರಾವತಿ: ನೆರೆಯ ಆಂಧ್ರ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದನ್ನು ಚಾಲಕನೋರ್ವ ತನ್ನ ಚಾಕಚಕ್ಯತೆಯಿಂದಾಗಿ ತಪ್ಪಿಸಿದ್ದಾನೆ.

ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಸರ್ಕಾರಿ ಬಸ್ ನ ಸ್ಟೀರಿಂಗ್ ಚಾಲನೆ ವೇಳೆಯಲ್ಲಿಯೇ ಚಾಲಕನ ಕೈಗೆ ಬಂದಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಸಂದಿಗ್ಧ  ಪರಿಸ್ಥಿತಿಯಲ್ಲಿಯೂ ತನ್ನ ಚಾಕಚಕ್ಯತೆ ತೋರಿದ ಚಾಲಕ ಬಸ್ ಅನ್ನು ಸಮೀಪದ ಹೊಲದೊಳಗೆ ತೆಗೆದುಕೊಂಡು ಹೋಗಿ ನಿಲ್ಲಿಸುವ ಮೂಲಕ ಪ್ರಯಾಣಿಕರ ಪ್ರಾಣರಕ್ಷಿಸಿದ್ದಾನೆ. ತಾಂತ್ರಿಕ  ದೋಷದಿಂದ ಕೂಡಿದ್ದ ಈ ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆ ವಿವಿರ:
ಆಂಧ್ರಪ್ರದೇಶದದ ಅನಂತಪುರ ಜಿಲ್ಲೆಯ ವಜ್ರಕರೂರ್ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಚಾಲಕ ಮತ್ತು ನಿರ್ವಾಹಕ ಸೇರಿ 40 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಎಪಿಎಸ್ ಆರ್ ಟಿಸಿ ಬಸ್  ಶುಕ್ರವಾರ ಬೆಳಗ್ಗೆ ಗುಂತಕಲ್ಲಿನಿಂದ ಉರವಕೊಂಡ ತಾಲ್ಲೂಕಿನತ್ತ ಪ್ರಯಾಣ ಬೆಳೆಸಿತ್ತು. ಸುಮಾರು 10 ನಿಮಿಷದ ಪ್ರಯಾಣದ ಬಳಿಕ ಬಸ್ ಗುಲ್ಯಾಪಾಲೆಂ ಗ್ರಾಮದ ಬಳಿ ಬರುತ್ತಿದ್ದಂತೆಯೇ ಚಾಲಕನ ಕೈಯಲ್ಲಿದ್ದ ಸ್ಟೀರಿಂಗ್ ಕಿತ್ತುಕೊಂಡು ಬಂದಿದೆ.

ತಾಂತ್ರಿಕ ತೊಂದರೆಗೀಡಾಗಿದ್ದ ಬಸ್ ನ ಸ್ಟೀರಿಂಗ್ ಆಕ್ಸೆಲ್ ಕಟ್ ಆಗಿ ಬಸ್ ಚಾಲಕನ ನಿಯಂತ್ರ ತಪ್ಪಿತ್ತು. ಇದನ್ನು ಕಂಡ  ಪ್ರಯಾಣಿಕರು ಆಘಾತಗೊಂಡಿದ್ದು, ಬಸ್ ನಲ್ಲೇ ಕೂಗಾಟ ಆರಂಭಿಸಿದ್ದಾರೆ. ಆದರೆ ಇದ್ಯಾವುದರಿಂದಲೂ ವಿಚಲಿತನಾಗದ ಚಾಲಕ ನಿಧಾನವಾಗಿ ಬಸ್ ಅನ್ನು ಸ್ಟೀರಿಂಗ್ ನ ಸಹಾಯವಿಲ್ಲದೆಯೇ  ಸಮೀಪದ ಹೊಲದಲ್ಲಿ ಇಳಿಸಿ ಬಸ್ ಅನ್ನು ನಿಲ್ಲಿಸಿದ್ದಾನೆ.

ಬಳಿಕ ಎಲ್ಲ ಪ್ರಯಾಣಿಕರು ಬಸ್ ನಿಂದ ಇಳಿದು ಬೇರೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಆ ಮೂಲಕ ಸುಮಾರು 40 ಮಂದಿಯ ಪ್ರಾಣವನ್ನು ಕಾಪಾಡಿದ್ದಾನೆ. ತನ್ನ ಚಾಕಚಕ್ಯತೆಯಿಂದಾಗಿ ಪ್ರಯಾಣಿಕರನ್ನು ರಕ್ಷಿಸಿದ ಚಾಲಕನನ್ನು ಬಸ್ ಪ್ರಯಾಣಿಕರೆಲ್ಲರೂ ಅಭಿನಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com