
ನವದೆಹಲಿ: ಅಕ್ರಮ ದಾಸ್ತಾನುಕೋರರಿಂದಾಗಿ ಬೇಳೆಕಾಳುಗಳ ಬೆಲೆ ಏರಿಕೆಯಿಂದ ಮುಜುಗರಕ್ಕೀಡಾಗಿರುವ ಕೇಂದ್ರ ಸರ್ಕಾರ ಈಗ ಬೆಲೆ ನಿಯಂತ್ರಣಕ್ಕಾಗಿ ನೇರ ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿದೆ.
ಪ್ರಸಕ್ತ ಹಂಗಾಮಿನಿಂದ ಸರ್ಕಾರವೇ ನೇರವಾಗಿ ರೈತರಿಂದ ಬೇಳೆಕಾಳು ಖರೀದಿಸಲಿದೆ. ಗರಿಷ್ಠ 5 ಲಕ್ಷ ಟನ್ ಖರೀದಿಸಿ ಕಾಪು ದಾಸ್ತಾನು ಇಡಲಿದೆ. ಇದರಿಂದ ಅಕ್ರಮದಾಸ್ತಾನುಕೋರರು ಮಾರುಕಟ್ಟೆ ನಿಯಂತ್ರಿಸಿ ಬೆಲೆ ಏರಿಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಬೇಳೆಕಾಳುಗಳ ಧಾರಣೆ ಮಿತಿ ಮೀರಿ ಏರಿದಾಗ ಕಾಪು ದಾಸ್ತಾನಿಡಲು 40 ಸಾವಿರ ಟನ್ ಖರೀದಿಗೆ ಸರ್ಕಾರ ನಿರ್ಧರಿಸಿತ್ತು. ಆದರೆ, ಸಮಸ್ಯೆ ಇರುವುದು ಅಕ್ರಮ ದಾಸ್ತಾನು ಕೋರರಿಂದಾಗಿ ಎಂಬುದನ್ನು ಅರಿತಿರುವ ಸರ್ಕಾರ ಸುಗ್ಗಿ ವೇಳೆಗೆ ನೇರವಾಗಿ ರೈತರಿಂದ 5 ಲಕ್ಷ ಟನ್ ಖರೀದಿಸಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮದಿಂದಾಗಿ ಎರಡು ಅನುಕೂಲಗಳಾಗಲಿವೆ. ಒಂದು ರೈತರಿಂದಲೇ ನೇರವಾಗಿ ಬೆಂಬಲ ಬೆಲೆಗೆ ಖರೀದಿಸುವುದರಿಂದ ರೈತರಿಗೆ ನ್ಯಾಯವಾದ ಬೆಲೆ ದಕ್ಕುತ್ತದೆ. ಎರಡು ಸುಗ್ಗಿ ವೇಳೆ ಖರೀದಿಸಿ ಕಾಪು ದಾಸ್ತಾನು ಇಡುವುದರಿಂದ ಬೆಲೆ ಏರಿಕೆ ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ಪ್ರಕಾರ, ಸಂಪುಟದ ಅನುಮೋದನೆ ಪಡೆಯಲು ಟಿಪ್ಪಣಿ ಸಿದ್ಧಪಡಿಸಲಾಗಿದೆ. ಅನುಮೋದನೆ ಪಡೆದು ಪ್ರಸಕ್ತ ಹಂಗಾಮಿನಿಂದಲೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದ (ನಫೆಡ್) ಮೂಲಕ ಬೇಳೆ ಕಾಳು ಖರೀದಿಸಲಾಗುತ್ತದೆ. ನಫೆಡ್ ರೈತರಿಂದ ನೇರ ಖರೀದಿಸುವುದರಿಂದ ತೊಗರಿ ಕಣಜ ಎಂದೇ ಹೆಸರಾಗಿರುವ ಕರ್ನಾಟಕದ ಉತ್ತರಭಾಗದ ರೈತರಿಗೂ ಅನುಕೂಲ ಆಗಲಿದೆ.
ದುಪ್ಪಟ್ಟು ಬೆಳೆ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೇಳೆಕಾಳುಗಳ ಬಿತ್ತನೆ ದುಪ್ಪಟ್ಟು ಪ್ರದೇಶದಲ್ಲಾಗಿದೆ. ಶುಕ್ರವಾರ ಕೃಷಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 9.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳುಗಳ ಬಿತ್ತನೆ ಮಾಡಲಾಗಿದೆ. ಕಳೆದ ಸಾಲಿನ ಹಿಂಗಾರಿನಲ್ಲಿ ಈ 4.7 ಲಕ್ಷ ಹೆಕ್ಟೇರ್‍ನಲ್ಲಿ ಬೆಳೆಕಾಳು ಬೆಳೆಯಲಾಗಿತ್ತು. ಬೆಳೆಕಾಳುಗಳ ಬಿತ್ತನೆ ಪ್ರಮಾಣ ಹೆಚ್ಚಾಗಲು ಈ ಸಾಲಿನಲ್ಲಿ ಧಾರಣೆ ಏರಿಕೆಯಾಗಿರುವುದು ಪ್ರಮುಖ ಕಾರಣ. ಹಿಂಗಾರು ಬೆಳೆಗೆ ಬಿತ್ತನೆ ಆರಂಭವಾಗುವ ಮುನ್ನವೇ ಬೇಳೆಕಾಳುಗಳ ಧಾರಣೆ ರು.200ರ ಗಡಿದಾಟಿತ್ತು. ಅಕ್ಟೋಬರ್‍ನಲ್ಲಿ ಹಿಂಗಾರು ಬಿತ್ತನೆಯಾದರೆ ಮಾರ್ಚ್‍ನಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಸರ್ಕಾರ ಮಾರ್ಚ್ಏಪ್ರಿಲ್‍ನಲ್ಲಿ ಅಂದರೆ ಸುಗ್ಗಿ ವೇಳೆಯಲ್ಲಿಯೇ ಕಾಪು ದಾಸ್ತಾನಿಗೆ ಖರೀದಿ ಮಾಡಲಿದೆ.
201314ರಲ್ಲಿ 19.20 ದಶಲಕ್ಷ ಟನ್ ಉತ್ಪಾದನೆಯಾಗಿದ್ದರೆ, 201415 ಸಾಲಿನ ಹಂಗಾಮಿನಲ್ಲಿ ಉತ್ಪಾದನೆ 17.38 ದಶಲಕ್ಷ ಟನ್‍ಗೆ ಕುಸಿದಿತ್ತು. ಆದರೆ, ರಾಷ್ಟ್ರದ ಒಟ್ಟು ಬೇಡಿಕೆ 23 ದಶಲಕ್ಷ ಟನ್. ಹೀಗಾಗಿ ಉತ್ಪಾದನೆ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಅಗತ್ಯಪ್ರಮಾಣದಷ್ಟು ಆಮದು ಮಾಡಿಕೊಂಡಿದ್ದರೂ ಕಳ್ಳದಾಸ್ತಾನುಗಾರರಿಂದಾಗಿ ಕೃತಕ ಕೊರತೆ ಸೃಷ್ಟಿಯಾಗಿ ಬೆಲೆ ಏರಿದೆ. ಪ್ರಸಕ್ತ ಸಾಲಿನಲ್ಲಿ 18 ದಶಲಕ್ಷ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ.
Advertisement