"ನಿನ್ನ ರೇಟ್ ಎಷ್ಟು"..? ಎಂದಾತನನ್ನು ಅಟ್ಟಾಡಿಸಿ ಹಿಡಿದ ಯುವತಿ

ದೇಶದ ವಾಣಿಜ್ಯ ರಾಜಧಾನಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಮತ್ತೆ ಸಾಬೀತಾಗಿದ್ದು, ಜಾಗಿಂಗ್ ಮಾಡುತ್ತಿದ್ದ ಯುವತಿಯನ್ನು ಛೇಡಿಸಿದ ಇಬ್ಬರು ಯುವಕರನ್ನು ಯುವತಿಯೇ ಅಟ್ಟಾಡಿಸಿ ಹಿಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಮತ್ತೆ ಸಾಬೀತಾಗಿದ್ದು, ಜಾಗಿಂಗ್ ಮಾಡುತ್ತಿದ್ದ ಯುವತಿಯನ್ನು ಛೇಡಿಸಿದ ಇಬ್ಬರು ಯುವಕರನ್ನು  ಯುವತಿಯೇ ಅಟ್ಟಾಡಿಸಿ ಹಿಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಂಬೈನ ಬಾಂದ್ರಾದಲ್ಲಿ ಈ ಘಟನೆ ಸಂಭವಿಸಿದ್ದು, ಗುರುವಾರ ಸಂಜೆ ಜಾಗಿಂಗ್ ಮಾಡುತ್ತಿದ್ದ ಮಾಡೆಲ್ ಮತ್ತು ಕಿರುತೆರೆ ನಟಿಯನ್ನು ಇಬ್ಬರು ಕಿಡಿಗೇಡಿಗಳು ಛೇಡಿಸಿದ್ದಾರೆ. ಇದರಿಂದ  ಕುಪಿತಗೊಂಡ ಯುವತಿ ಅವರ ವಿರುದ್ಧ ಕೂಗಾಡಿದ್ದಾರೆ. ಅಲ್ಲಿ ಜನ ಸೇರುತ್ತಿದ್ದಂತೆಯೇ ಕಿಡಿಗೇಡಿಗಳು ಅಲ್ಲಿಂದ ಕಾಲ್ಕಿತ್ತಿದ್ದು, ಆಟೋದಲ್ಲಿ ಅವರನ್ನು ಹಿಂಬಾಲಿಸಿದ ಯುವತಿ ಅವರನ್ನು  ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ. ಪ್ರಸ್ತುತ ಓರ್ವ ಆರೋಪಿ ಪೊಲೀಸರಿಂದಲೂ ತಪ್ಪಿಸಿಕೊಂಡು ಹೋಗಿದ್ದು, ಮತ್ತೋರ್ವನನ್ನು ವಿಚಾರಣೆಗೊಳಪಡಿಸಲಾಗಿದೆ. ಬಂಧಿತ  ಆರೋಪಿಯನ್ನು ಹರ್ಯಾಣ ಮೂಲದ 27 ವರ್ಷದ ಬಾಕ್ಸರ್ ದಿನೇಶ್ ಯಾದವ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಮುಂಬೈನ ಬಾಂದ್ರಾದಲ್ಲಿ ಕಳೆದ ಗುರುವಾರ ಸಂಜೆ ಪೂರ್ಣಿಮಾ ಎಂಬ ಕಿರುತೆರೆ ನಟಿ ಜಾಗಿಂಗ್ ಮಾಡುತ್ತಿದ್ದರು. ಈ ವೇಳೆ ಕಲ್ಲಿನ ಬೆಂಚ್ ಮೇಲೆ ಏಕಾಂಗಿಯಾಗಿ ಕುಳಿತಿದ್ದ  ಪೂರ್ಣಿಮಾರನ್ನು ಕಂಡ ಯುವಕನೋರ್ವ ಆಕೆಯ ಬಳಿಗೆ ಬಂದು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಪೂರ್ಣಿಮಾ ತನ್ನ ಮೊಬೈಲ್ ನಲ್ಲಿ ಕುಟುಂಬದವರೊಡನೆ  ಮಾತನಾಡುತ್ತಿದ್ದು, ಈತನ ಬಗ್ಗೆ ಅಷ್ಟಾಗಿ ಗಮನ ಕೊಡಲಿಲ್ಲ. ಆದರೆ ಕೆಲ ಸಮಯದ ಬಳಿಕ ಮತ್ತೆ ಬಂದ ಯುವಕ ಮತ್ತೆ ಆಕೆಯನ್ನು ಮಾತಿಗೆಳೆಯಲು ಪ್ರಯತ್ನಿಸಿದ್ದಾನೆ. ಇದಾದ ಸ್ವಲ್ಪ  ಹೊತ್ತಿನಲ್ಲೇ ಮತ್ತೋರ್ವ ಯುವಕ ಬಂದು ಪೂರ್ಣಿಮಾ ಕುಳಿತಿದ್ದ ಬೆಂಚ್ ನ ಹಿಂಬದಿಯಲ್ಲಿ ಕುಳಿತುಕೊಳ್ಳುತ್ತಾನೆ. ಇದರ ಅರಿವೇ ಇಲ್ಲದ ಪೂರ್ಣಿಮಾ ತನ್ನ ಪಾಡಿಗೆ ಮೊಬೈಲ್ ನಲ್ಲಿ  ಮಾತನಾಡುತ್ತಿದ್ದರೆ, ಹಿಂಬದಿ ಬೆಂಚ್ ಮೇಲೆ ಕುಳಿತಿದ್ದ ಯುವಕ ಪೂರ್ಣಿಮಾಗೆ ತೀರ ಹತ್ತಿರಕ್ಕೆ ಬಂದಾಗ ಆಕೆಗೆ ಭಯವಾಗಿ ಆತನನ್ನು ಪ್ರಶ್ನಿಸುತ್ತಾಳೆ. ಈ ವೇಳೆ ಮೊದಲು ಆಗಮಿಸಿದ್ದ  ಯುವಕ ಬಂದ ಆಕೆಯನ್ನು ಅಸಭ್ಯವಾಗಿ ನಿನ್ನ ರೇಟ್ ಎಷ್ಟು ಪ್ರಶ್ನಿಸುತ್ತಾನೆ.

ಇದರಿಂದ ಕುಪಿತಳಾಗುವ ಪೂರ್ಣಿಮಾ ಇಬ್ಬರು ಯುವಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಪೊಲೀಸರಿಗೆ ದೂರು ನೀಡುವ ಬೆದರಿಕೆ ಹಾಕುತ್ತಾಳೆಯಾದರೂ ಅದಕ್ಕೆ ಹೆದರದ ಅವರು  ಮತ್ತೆ ಆಕೆಯನ್ನು ಛೇಡಿಸುತ್ತಾರೆ. ಆಗ ಪೂರ್ಣಿಮಾ ಅಲ್ಲಿನ ಸ್ಥಳೀಯರ ನೆರವು ಕೋರುತ್ತಾಳಾದರೂ ಅವರಾರು ಅಕೆಯ ನೆರವಿಗೆ ಬರುವುದಿಲ್ಲ. ಕೇವಲ ಅವರನ್ನು ಸುತ್ತುವರೆದು ತಮಾಷೆ  ನೋಡುತ್ತಿರುತ್ತಾರೆ. ಇತ್ತ ತಮ್ಮತ್ತ ಜನ ಸೇರುತ್ತಿದ್ದಂತೆಯೇ ಬೆದರಿದ ಯುವಕರು ಅಲ್ಲಿಂದ ಕಾಲ್ಕೀಳುತ್ತಾರೆ. ಆದರೆ ಪೂರ್ಣಿಮಾ ಮಾತ್ರ ಅವರನ್ನು ಇಷ್ಟಕ್ಕೇ ಬಿಡದೇ ಅವರನ್ನು  ಆಟೋದಲ್ಲಿ ಹಿಂಬಾಲಿಸುತ್ತಾರೆ. ದಾರಿಯಲ್ಲಿ ಸಿಕ್ಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡುತ್ತಾರಾದರೂ ಪೊಲೀಸರು ಇಷ್ಟು ಚಿಕ್ಕ ವಿಷಯಕ್ಕೆಲ್ಲಾ ಪೊಲೀಸ್ ಏಕೆ ಎಂದು ಹೇಳುತ್ತಾರೆ.  ಪಟ್ಟುಬಿಡದ ಪೂರ್ಣಿಮಾ ಅವರ ವಿರುದ್ಧ ಎಫ್ ಐಆರ್ ದಾಖಲಿಸುತ್ತೇನೆ ಎಂದು ಹೇಳಿ ಅವರನ್ನು ಹಿಂಬಾಲಿಸಿ ಅವರನ್ನು ಹಿಡಿಯುತ್ತಾಳೆ.

ಬಾಂದ್ರಾ ಠಾಣೆಯಲ್ಲಿ ದೂರು ದಾಖಲಿಸಿ ಎಫ್ ಐಆರ್ ಕೂಡ ಹಾಕಿಸುತ್ತಾಳೆ. ಪೊಲೀಸ್ ಮೂಲಗಳ ಪ್ರಕಾರ ಇಬ್ಬರು ಆರೋಪಿಗಳು ಹರ್ಯಾಣ ಮೂಲದ ಬಾಕ್ಸರ್ ಗಳಾಗಿದ್ದು, ಓರ್ವನ  ಹೆಸರು ದಿನೇಶ್ ಯಾದವ್ ಎಂದು ತಿಳಿದುಬಂದಿದೆ. ಪೊಲೀಸ್ ವಶದಲ್ಲಿದ್ದ ಮತ್ತೋರ್ವ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com