ಪ್ರಧಾನಿಗೆ ಕೇರಳ ಸಿಎಂ ಪತ್ರ: ಕೇರಳ ಹೌಸ್ ಮೆನುನಲ್ಲಿ "ಬೀಫ್" ಮರು ಸೇರ್ಪಡೆ

ದೆಹಲಿ ಪೊಲೀಸ್ ದಾಳಿ ನಂತರ ಕೇರಳ ಹೌಸ್ ಮೆನುನಿಂದ ತೆಗೆದು ಹಾಕಲಾಗಿದ್ದ ಬೀಫ್ ಖಾದ್ಯವನ್ನು ಮಂಗಳವಾರ ಮತ್ತೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ...
ಕೇರಳ ಹೌಸ್ ದಾಳಿ ವಿರೋಧಿಸಿ ಕೇರಳ ಸಂಸದರ ಪ್ರತಿಭಟನೆ
ಕೇರಳ ಹೌಸ್ ದಾಳಿ ವಿರೋಧಿಸಿ ಕೇರಳ ಸಂಸದರ ಪ್ರತಿಭಟನೆ
Updated on

ನವದೆಹಲಿ: ದೆಹಲಿ ಪೊಲೀಸ್ ದಾಳಿ ನಂತರ ಕೇರಳ ಹೌಸ್ ಮೆನುನಿಂದ ತೆಗೆದು ಹಾಕಲಾಗಿದ್ದ ಬೀಫ್ ಖಾದ್ಯವನ್ನು ಮಂಗಳವಾರ ಸಂಜೆ ಮತ್ತೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಕೇರಳ ಹೌಸ್ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇರಳ ಹೌಸ್ ಅಧಿಕಾರಿಗಳು ಇಂದು ಸಂಜೆ ಮತ್ತೆ ತಮ್ಮ ಮೆನುನಲ್ಲಿ ಬೀಫ್ ಖಾದ್ಯಗಳನ್ನು ಮರು ಸೇರ್ಪಡೆಗೊಳಿಸಿದ್ದಾರೆ. ಆದರೆ ಗೋಮಾಂಸವನ್ನು ವಿತರಿಸಲಾಗಿದೆ ಎಂಬ ಆರೋಪವನ್ನು ತಿರಸ್ಕರಿಸಿರುವ ಕೇರಳ ಹೌಸ್ ಅಧಿಕಾರಿಗಳು, ಅತಿಥಿಗಳಿಗೆ ಎಮ್ಮೆ ಮಾಂಸದ ಖಾಧ್ಯಗಳನ್ನು ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿರುವ ಕೇರಳ ಹೌಸ್ ನಲ್ಲಿ ಅತಿಥಿಗಳಿಗೆ ಬೀಫ್ ಖಾಧ್ಯಗಳನ್ನು ಉಣಬಡಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತನೆಂದು ಹೇಳಲಾಗುತ್ತಿರುವ ವ್ಯಕ್ತಿ ದೆಹಲಿ ಪೊಲೀಸರಿಗೆ ಸೋಮವಾರ ದೂರು ನೀಡಿದ್ದ. ದೂರಿನನ್ವಯ ಇಂದು ಕೇರಳ ಹೌಸ್ ಮೇಲೆ ದಾಳಿ ನಡೆಸಿದ್ದ ದೆಹಲಿ ಪೊಲೀಸರು ಶೋಧ ನಡೆಸಿದ್ದರು. ದೆಹಲಿ ಪೊಲೀಸರ ಈ ದಿಢೀರ್ ದಾಳಿ ರಾಜಕೀಯ ವಲಯದಲ್ಲಿ ಮತ್ತು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೆಹಲಿ ಪೊಲೀಸರ ಈ ನಡೆಯನ್ನು ಸ್ವತಃ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಕೇರಳ ಸಿಎಂ ಪ್ರತಿಭಟನಾ ಪತ್ರ

ಇನ್ನು ದೆಹಲಿಯಲ್ಲಿರುವ ಕೇರಳ ಹೌಸ್ ಮೇಲೆ ಪೊಲೀಸರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಸಿಎಂ ಉಮ್ಮನ್ ಚಾಂಡಿ ಅವರು ಪತ್ರ ಬರೆದಿದ್ದು,  ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ದಾಳಿಯನ್ನು ಖಂಡಿಸಿರುವ ಅವರು, ಪೊಲೀಸ್ ದಾಳಿ ದುರದೃಷ್ಟಕರ. ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಮತ್ತು ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಸೂಚಿಸಬೇಕು. ಭವಿಷ್ಯದಲ್ಲಿ ಮತ್ತೆ ಇಂತಹ ಘಟನೆಗಳು ಸಂಭವಿಸದಂತೆ ತಡೆಯಬೇಕು ಎಂದು ಉಮ್ಮನ್ ಚಾಂಡಿ ಮನವಿ ಮಾಡಿದ್ದಾರೆ.

"ಕೆಲವು ಸಂಘಟನೆ ಅಥವಾ ವ್ಯಕ್ತಿಗಳು ಸುಖಾಸುಮ್ಮನೆ ಗೋಮಾಂಸ ನಿಷೇಧಕ್ಕೆ ಸಂಬಂಧಿಸಿದಂತೆ ವಿವಾದ ಹುಟ್ಟಿಸುತ್ತಿದ್ದಾರೆ. ಕೇರಳ ಹೌಸ್ ಎಂಬುದು ಹಣಗಳಿಕೆಗಾಗಿ ನಡೆಸುವ ಖಾಸಗಿ ಹೊಟೆಲ್ ಅಥವಾ ರೆಸ್ಟೋರೆಂಟ್ ಅಲ್ಲ. ಇದು ಕೇರಳ ಸರ್ಕಾರದ ಅಧಿಕೃತ ಅತಿಥಿ ಗೃಹವಾಗಿದ್ದು, ಇಲ್ಲಿ ಕೇರಳದ ಅಧಿಕೃತ ಪಾಕಪದ್ಧತಿಯಂತೆಯೇ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಮೆನುನಲ್ಲಿರುವ ಎಲ್ಲ ಖಾಧ್ಯಗಳು ಕಾನೂನಿನಡಿಯಲ್ಲಿಯೇ ಇದೆ. ಹೀಗಿದ್ದು ದೆಹಲಿ ಪೊಲೀಸರ ದಾಳಿ ನಿಜಕ್ಕೂ ದುರದೃಷ್ಟಕರ. ಕೇರಳ ಹೌಸ್ ಮೇಲೆ ದಾಳಿ ನಡೆಸುವ ಮುನ್ನ ಅವರು ಕೊಂಚ ಸಂಯಮ ತೋರಬೇಕಿತ್ತು. ಆಯುಕ್ತರ ಯಾವುದೇ ಮಾಹಿತಿ ಮತ್ತು ಅನುಮತಿ ಇಲ್ಲದೇ ಪೊಲೀಸರು ಅಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಹೀಗಾಗಿ ದೆಹಲಿ  ಪೊಲೀಸರ ನಡೆ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ಕೇರಳ ಸರ್ಕಾರ ಔಪಚಾರಿಕ ದೂರು ನೀಡಲಿದೆ" ಎಂದು ಚಾಂಡಿ ಪತ್ರದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com