
ನವದೆಹಲಿ: ಗೋಮಾಂಸ ವಿತರಣೆ ಆರೋಪದ ಮೇಲೆ ಮಂಗಳವಾರ ಕೇರಳ ಹೌಸ್ ಮೇಲೆ ನಡೆದ ಪೊಲೀಸ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ದೂರು ನೀಡುವುದಾಗಿ ಕೇರಳ ಗೃಹ ಸಚಿವ ರಮೇಶ್ ಚನ್ನಿಟಾಲ ಇಛೋಡ್ ಚಾಂಡಿ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಪೊಲೀಸರ ನಡೆ ರಾಜ್ಯ ಸರ್ಕಾರದ ಅಧಿಕಾರದ ಉಲ್ಲಂಘನೆಯಾಗಿದೆ. ಹೀಗಾಗಿ ಪ್ರಕರಣ ಸಂಬಂಧ ಶೀಘ್ರದಲ್ಲಿಯೇ ಕೇರಳ ಸರ್ಕಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಪತ್ರ ಬರೆದು ಪ್ರತಿಭಟನೆಯನ್ನು ವ್ಯಕ್ತಪಡಿಸಲಿದೆ ಎಂದು ಹೇಳಿದರು.
ಮಂಗಳವಾರ ಕೇರಳ ಹೌಸ್ ಮೇಲೆ ನಡೆದ ಪೊಲೀಸ್ ದಾಳಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಲವು ರಾಜಕೀಯ ಮುಖಂಡರು ದೆಹಲಿ ಪೊಲೀಸರ ನಡೆಯನ್ನು ವಿರೋಧಿಸಿದ್ದಾರೆ. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಎಕೆ ಆ್ಯಂಟನಿ ಅವರು, ಒಬ್ಬ ವ್ಯಕ್ತಿ ಏನನ್ನು ತಿನ್ನಬೇಕು ಮತ್ತು ಏನನ್ನು ತೊಡಬೇಕು ಎನ್ನುವುದು ಆತನ ಖಾಸಗೀ ನಿರ್ಧಾರವಾಗಿರುತ್ತದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಯಾವುದೇ ಕಾರಣಕ್ಕೆ ಈ ಹಕ್ಕನ್ನು ಉಲ್ಲಂಘಿಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗೋಮಾಂಸ ಭಕ್ಷಣೆ ಆರೋಪಕ್ಕೆ ಸಂಬಂಧಿಸಿದಂತೆ ತೀವ್ರ ಚರ್ಚೆಗೆ ಗ್ರಾಸವಾದ ದಾದ್ರಿ ಪ್ರಕರಣ ಹಸಿರಾಗಿರುವಾಗಲೇ ಕೇರಳ ಹೌಸ್ ಮೇಲೆ ಪೊಲೀಸ್ ದಾಳಿ ನಡೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
Advertisement