
ನವದೆಹಲಿ: ಇಂಡೋನೇಷ್ಯಾದಲ್ಲಿ ಸೆರೆಸಿಕ್ಕಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆತಿದೆ.
ಮೂಲಗಳ ಪ್ರಕಾರ ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಇಂಡೋನೇಷ್ಯಾ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಛೋಟಾ ರಾಜನ್‌ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಅಪರಾಧಿಗಳ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ಮತ್ತು ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿಯನ್ನೊಳಗೊಂಡ ವರದಿ ಸಲ್ಲಿಸಬೇಕಾಗಿರುವುದರಿಂದ ಸಿಬಿಐ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ಇದರ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್‌ಪೋಲ್ ಅಧಿಕಾರಿಗಳ ಜತೆ ಸಿಬಿಐನ ಹಿರಿಯ ಅಧಿಕಾರಿಗಳು ಮಾಹಿತಿ ವಿನಿಮಯ ಮಾಡಿಕೊಂಡಿದ್ದು, ಯಾವುದೇ ಸಂದರ್ಭದಲ್ಲಾದರೂ ವಿಶೇಷ ತಂಡವನ್ನು ಬಾಲಿಗೆ ಕಳುಹಿಸಿಕೊಡುವ ಸಾಧ್ಯತೆ ಇದೆ. ಇದರ ನಡುವೆಯೇ ಇಂಡೋನೇಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಕೆಲವು ದಾಖಲೆಗಳನ್ನು ಕಳುಹಿಸಲಾಗಿದ್ದು, ಅದನ್ನು ಈಗ ಇಂಡೋನೇಷ್ಯಾದ ಅಪರಾಧ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, "ವಿಧ್ವಂಸಕ ಕೃತ್ಯಗಳನ್ನು ನಡೆಸಿ ಅಮಾಯಕರನ್ನು ಬಲಿ ಪಡೆದು ತಲೆಮರೆಸಿಕೊಂಡಿರುವ ಗ್ಯಾಂಗ್‌ಸ್ಟರ್‌ಗಳನ್ನು ಪತ್ತೆ ಹಚ್ಚಿ ಕಾನೂನಿನಡಿ ಅವರಿಗೆ ಶಿಕ್ಷೆ ನೀಡಲು ಮಹಾರಾಷ್ಟ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಇದರಲ್ಲಿ ದಾವೂದ್ ಇಬ್ರಾಹಿಂ ಅಲ್ಲದೆ ಇನ್ನೂ ಹಲವು ಪಾತಕಿಗಳು ಇದ್ದಾರೆ. ಅವರನ್ನೂ ಶೀಘ್ರದಲ್ಲೇ ಸೆರೆ ಹಿಡಿಯುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ಗೃಹ ಇಲಾಖೆಯ ದಾಖಲೆಗಳ ಪ್ರಕಾರ ಛೋಟಾ ರಾಜನ್ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದಾಖಲಾಗಿದೆ. ಆತನನ್ನು ಇಲ್ಲಿಗೆ ಕರೆತಂದು ಕಾನೂನಿನಡಿ ವಿಚಾರಣೆಗೊಳಪಡಿಸಿ ಶಿಕ್ಷಿಸುವುದರಲ್ಲಿ ಎರಡು ಮಾತಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.
Advertisement