15 ದಿನಗಳ ಹಿಂದೆಯೇ ಸೆರೆಸಿಕ್ಕಿದ್ದನೇ ರಾಜನ್?

ಭೂಗತ ಪಾತಕಿ ಛೋಟಾ ರಾಜನ್ ಬಂಧನಕ್ಕೆ ಹೊಸ ತಿರುವು ಸಿಕ್ಕಿದ್ದು, ಈತನನ್ನು 15 ದಿನಗಳ ಹಿಂದೆಯೇ ಬಂಧಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಆತನ ಮೇಲಾಗಬಹುದಾದ ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳೇ ರಾಜನ್‍ನನ್ನು...
ಬಂಧಿತ ಚೋಟಾ ರಾಜನ್ ನಿಂದ ವಶಪಡಿಸಿಕೊಂಡಿರುವ ಪಾಸ್ ಪೋರ್ಟ್
ಬಂಧಿತ ಚೋಟಾ ರಾಜನ್ ನಿಂದ ವಶಪಡಿಸಿಕೊಂಡಿರುವ ಪಾಸ್ ಪೋರ್ಟ್

ಬಾಲಿ/ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಬಂಧನಕ್ಕೆ ಹೊಸ ತಿರುವು ಸಿಕ್ಕಿದ್ದು, ಈತನನ್ನು 15 ದಿನಗಳ ಹಿಂದೆಯೇ ಬಂಧಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಆತನ ಮೇಲಾಗಬಹುದಾದ ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳೇ ರಾಜನ್‍ನನ್ನು ಶರಣಾಗುವಂತೆ ಮನವೊಲಿಸಿದ್ದವು ಎಂದು ಮೂಲಗಳು ತಿಳಿಸಿವೆ.

ರಾಜನ್ ತನ್ನ ಬಗೆಗಿನ ಅನೇಕ ಮಾಹಿತಿಗಳನ್ನು ಭಾರತದ ಭದ್ರತಾ ಸಂಸ್ಥೆಗಳಿಗೆ ಸೋರಿಕೆ ಮಾಡುತ್ತಿದ್ದಾನೆ ಎಂಬ ವಿಚಾರ ದಾವೂದ್‍ಗೆ ಗೊತ್ತಾಗಿತ್ತು. ಇದನ್ನು ಆತ ಛೋಟಾ ಶಕೀಲ್‍ಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ರಾಜನ್‍ನನ್ನು ಸಿಡ್ನಿಯಲ್ಲಿ ಕೊಲ್ಲಲು ಗ್ಯಾಂಗ್‍ಸ್ಟರ್ ಶಕೀಲ್ ಯೋಜನೆ ರೂಪಿಸಿದ್ದ. ಇಂತಹ ಉದ್ವಿಗ್ನ ಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಸ್ಟ್ರೇಲಿಯಾ ಸರ್ಕಾರವು ಭಾರತವನ್ನು ಸಂಪರ್ಕಿಸಿ, ರಾಜನ್‍ನನ್ನು ಹಿಡಿಯುವಲ್ಲಿ ನೆರವು ನೀಡುವಂತೆ ಕೋರಿತು.

ಅದರಂತೆ, ಆತನ ಬಂಧನಕ್ಕೆ ಬಾಲಿಯೇ ಸೂಕ್ತ ಜಾಗ ಎಂದು ನಿರ್ಧರಿಸಿ, ಬಲೆ ಬೀಸಲಾಯಿತು ಎಂದು ಸಿಎನ್‍ಎನ್ ಐಬಿಎನ್ ವರದಿ ಮಾಡಿದೆ. ಅಲ್ಲದೆ, ರಾಜನ್ ಬಂಧನದಿಂದ ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಮಾಹಿತಿ ಸಿಗಲಿಕ್ಕಿಲ್ಲ ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ಅಡುಗೆಯವನಿಂದಲೇ ದ್ರೋಹ
ಛೋಟಾ ರಾಜನ್ ನ ಅಡುಗೆಯಾತ ಮತ್ತು ಸಹಚರರೇ ಅವನಿಗೆ ದ್ರೋಹವೆಸಗಿದರು ಎಂದು ಮೇಟ್ ಟುಡೆ ವರದಿ ಮಾಡಿದೆ. ರಾಜನ್ ನ ಚಲನವಲನಗಳ ಬಗ್ಗೆ ಅಡುಗೆಯಾತನೇ ಡಿ-ಕಂಪನಿಗೆ ಮಾಹಿತಿ ನೀಡುತ್ತಿದ್ದ. ಇದನ್ನು ಆಧರಿಸಿಯೇ ಜುಲೈನಲ್ಲಿ ಸಿಡ್ನಿಯ ಕೆಫೆಯಲ್ಲಿ ರಾಜನ್ ಮೇಲೆ ದಾಳಿ ನಡೆದಿತ್ತು. ಅದೃಷ್ಟವಶಾತ್ ರಾಜನ್ ತಪ್ಪಿಸಿಕೊಂಡ. ಆದರೆ, ಇನ್ನು ಮುಂದೆ ತಾನು ಎಷ್ಟು ತಲೆಮರೆಸಿಕೊಂಡರೂ ದಾವೂದ್ ಬಂಟರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರಿತ ರಾಜನ್, ಶರಣಾಗಲು ಹಾದಿ ಹುಡುಕತೊಡಗಿದ ಎಂದು ಆತನ ಇಬ್ಬರು ಸಹಚರರು ಫೋನ್ ಮೂಲಕ ಮೇಲ್ ಟುಡೇಗೆ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಬೇಡ, ಜಿಂಬಾಬ್ವೆಗೆ ಕರೆದೊಯ್ಯಿರಿ
``ಭಾರತದಲ್ಲಿ ನನ್ನ ಜೀವಕ್ಕೆ ಬೆದರಿಕೆಯಿದೆ. ಅಲ್ಲಿ ಹೋದರೆ ನನ್ನನ್ನು ಉಳಿಸುವುದಿಲ್ಲ. ದಯವಿಟ್ಟು, ನನ್ನನ್ನು ಜಿಂಬಾಬ್ವೆಗೆ ಗಡಿಪಾರು ಮಾಡಿ''. ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿಸಲ್ಪಟ್ಟ ಕೂಡಲೇ ಛೋಟಾ ರಾಜನ್ ಆಡಿದ ಮಾತುಗಳಿವು. ಈ ಬಗ್ಗೆ ಮಾಹಿತಿ ನೀಡಿರುವ ಬಾಲಿ ಸಿಐಡಿ ಆಫೀಸರ್ ಮೇಜರ್ ರೈನ್‍ಹಾರ್ಡ್, ``ನಾವು ವಿಚಾರಣೆ ಆರಂಭಿಸಿದಾಗ ಮೊದಲು ಅವನು ತಾನು ಛೋಟಾ ರಾಜನ್ ಎಂದು ಒಪ್ಪಿಕೊಳ್ಳಲಿಲ್ಲ. ಪಾಸ್ ಪೋರ್ಟ್ ತೋರಿಸಿ ಮೋಹನ್‍ಕುಮಾರ್ ಎಂದೇ ವಾದಿಸತೊಡಗಿದ. ಕೊನೆಗೆ, ನಿಜ ಒಪ್ಪಿಕೊಂಡ. ಬಳಿಕ, ನನ್ನನ್ನು ಭಾರತಕ್ಕೆ ಕಳುಹಿಸಬೇಡಿ, ಜಿಂಬಾಬ್ವೆಗೆ ಕಳುಹಿಸಿ ಎಂದು ಕೇಳಿಕೊಂಡ'' ಎಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com