ರಾಜನ್ ಬಂಧನದ ಹಿಂದೆ ಅಜಿತ್ ಧೋವಲ್ ಮಾಸ್ಟರ್ ಮೈಂಡ್?

ಹಲವು ದಶಕಗಳಿಂದ ಭಾರತೀಯ ಭದ್ರತಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಭೂಗತ ಪಾತಕಿ ಛೋಟಾ ರಾಜನ್ ಬಂಧನದೊಂದಿಗೆ ಭೂಗತ ಲೋಕದ ಅಡಿಪಾಯ ಅಲುಗಾಡುತ್ತಿದ್ದು, ತಲೆಮರೆಸಿಕೊಂಡಿರುವ ಇತರೆ ಪಾತಕಿಗಳಿಗೆ ಇದೀಗ ನಡುಕ ಶುರುವಾಗಿದೆ...
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ (ಒಳಚಿತ್ರ-ಭೂಗತ ಪಾತಕಿ ಛೋಟಾ ರಾಜನ್)
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ (ಒಳಚಿತ್ರ-ಭೂಗತ ಪಾತಕಿ ಛೋಟಾ ರಾಜನ್)

ನವದೆಹಲಿ: ಹಲವು ದಶಕಗಳಿಂದ ಭಾರತೀಯ ಭದ್ರತಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಭೂಗತ ಪಾತಕಿ ಛೋಟಾ ರಾಜನ್ ಬಂಧನದೊಂದಿಗೆ ಭೂಗತ ಲೋಕದ ಅಡಿಪಾಯ ಅಲುಗಾಡುತ್ತಿದ್ದು, ತಲೆಮರೆಸಿಕೊಂಡಿರುವ ಇತರೆ ಪಾತಕಿಗಳಿಗೆ ಇದೀಗ ನಡುಕ ಶುರುವಾಗಿದೆ.

ಇನ್ನು ಇಡೀ ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಭೂಗತ ಪಾತಕಿ ಛೋಟಾ ರಾಜನ್ ಬಂಧನದ ಹಿಂದೆ ಭಾರತದ ಹಿರಿಯ ಅಧಿಕಾರಿಯೊಬ್ಬರು ಮಾಸ್ಟರ್ ಮೈಂಡ್ ಆಗಿ ಕಾರ್ಯ ನಿರ್ವಹಿಸಿದ್ದರು  ಎಂಬ ಮಾಹಿತಿ ಲಭ್ಯವಾಗುತ್ತಿದೆ. ಛೋಟಾ ರಾಜನ್ ಬಂಧನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಬಂಧನ ಪ್ರಹಸನಕ್ಕೆ ಅಡಿಪಾಯ ಹಾಕಿದವರು ಬೇರಾರು ಅಲ್ಲ, ಭಾರತದ ಭದ್ರತಾ ಸಲಹೆಗಾರ  ಅಜಿತ್ ಧೋವಲ್. ಹೌದು, ದಶಕಗಳಿಂದ ಭದ್ರತಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಭೂಗತ ಪಾತಕಿ ಛೋಟಾ ರಾಜನ್ ಬಂಧನ ಪ್ರಕ್ರಿಯೆಯಲ್ಲಿ ಅಜಿತ್ ಧೋವಲ್ ಅವರು ಪ್ರಮುಖ  ಪಾತ್ರ ನಿರ್ವಹಿಸಿದ್ದಾರೆ. ಒಂದು ಮೂಲದ ಪ್ರಕಾರ ರಾಜನ್ ಬಂಧನಕ್ಕೆ ಪ್ಲಾನಿಂಗ್ ತಯಾರಿಸಿದ್ದೇ ಅಜಿತ್ ಧೋವಲ್ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಇಂಡೋನೇಷ್ಯಾದ ಬಾಲಿ ರೆಸಾರ್ಟ್ ಗೆ ರಾಜನ್ ಆಗಮನದ ಮಾಹಿತಿಯನ್ನು ಭಾರತದ ಬಾಹ್ಯ ಬೇಹುಗಾರಿಕಾ ಸಂಸ್ಥೆ ಮತ್ತು ರಾ ಇಂಡೋನೇಷ್ಯಾ ಸರ್ಕಾರಕ್ಕೆ ನೀಡಿತ್ತು.  ಇದನ್ನು ಸ್ವತಃ ಭಾರತ ಸರ್ಕಾರವೇ ಒಪ್ಪಿಕೊಂಡಿದ್ದು, ಈ ಬಗ್ಗೆ ನಿನ್ನೆ ಮಾತನಾಡಿದ್ದ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ರಾಜನ್ ಬಂಧನಕ್ಕೆ ಸಂಬಂಧಿಸಿದಂತೆ  ಮೊದಲೇ ಭಾರತ ಯೋಜನೆ ರೂಪಿಸಿಕೊಂಡಿತ್ತು ಎಂದು ಹೇಳಿದ್ದಾರೆ.

ರಾಜನ್ ಮುಗಿಸಲು ದಾವೂದ್ ಹೆಣೆದಿದ್ದ ಸಂಚು ಬಯಲು..!
 ಇದೇ ವೇಳೆ ದಾವೂದ್ ತನ್ನ ವಿರೋಧಿ ಛೋಟಾ ರಾಜನ್ ನನ್ನು ಮುಗಿಸಲು ತನ್ನ ಭಂಟ ಛೋಟಾ ಶಕೀಲ್ ನಿರ್ದೇಶನ ನೀಡಿದ್ದ. ಇದರನ್ವಯ ಕಾರ್ಯಪ್ರವೃತ್ತನಾಗಿದ್ದ ಶಕೀಲ್ ಛೋಟಾ  ರಾಜನ್ ನ ಸಿಡ್ನಿ ನಿವಾಸದ ಸುತ್ತ ತನ್ನ ಭಂಟರನ್ನು ವಿಚಕ್ಷಣೆಗಾಗಿ ಬಿಟ್ಟಿದ್ದ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಸಂಪಾದಿಸಿತ್ತು. ದಾವೂದ್ ಸಹಚರರು ಮತ್ತು ಶಾರ್ಪ್ ಶೂಟರ್ ಗಳು  ಸಿಡ್ನಿಯಲ್ಲಿರುವ ರಾಜನ್ ಮನೆಯ ಸುತ್ತಮುತ್ತಲಿನ ರಸ್ತೆಗಳನ್ನು, ಮತ್ತು ಆತ ಹೆಚ್ಚು ಬಾರಿ ಉಪಯೋಗಿಸುವ ರಸ್ತೆಗಳ ಕುರಿತು ಮಾಹಿತಿ ಪಡೆಯುತ್ತಿದ್ದರು. ಈಗ್ಗೆ ವರ್ಷದ ಹಿಂದೆ ದಾವೂದ್  ಸಹಚರರು ಛೋಟಾ ರಾಜನ್ ನನ್ನು ಹತ್ಯೆಗೈಯ್ಯಲು ಯತ್ನಿಸಿದ್ದರು. ನ್ಯೂಕ್ಯಾಸ್ಟಲ್ ನಲ್ಲಿ ತಂಗಿದ್ದ ರಾಜನ್ ಮೇಲೆ ದಾವೂದ್ ಸಹಚರರು ದಾಳಿ ಮಾಡಿದ್ದರಾದರೂ, ರಾಜನ್ ಪ್ರಾಣಾಪಾಯದಿಂದ  ಪಾರಾಗಿದ್ದ. ಈ ಘಟನೆ ಬಳಿಕ ಭಾರತೀಯ ಅಧಿಕಾರಿಗಳು ಆಸ್ಟ್ರೇಲಿಯಾ ಪೊಲೀಸರೊಂದಿಗೆ ಭೂಗತ ಪಾತಕಿಗಳ ಕುರಿತು ಮಾಹಿತಿ ವಿನಿಮಯ ಪ್ರಕ್ರಿಯೆ ಆರಂಭಿಸಿದರು.

ಇದರ ಫಲವಾಗಿ ರಾಜನ್ ನಕಲಿ ಪಾಸ್ ಪೋರ್ಟ್ ಸೃಷ್ಟಿಸಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಯಿತು. ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ರಾಜನ್ ನಕಲಿ ಪಾಸ್ ಪೋರ್ಟ್  ಸೃಷ್ಟಿಸಿಕೊಂಡಿದ್ದನು. ನಿಧಾನವಾಗಿ ರಾಜನ್ ಚಲನವಲನಗಳನ್ನು ವೀಕ್ಷಣೆಯಲ್ಲಿಟ್ಟಿದ್ದ ಅಧಿಕಾರಿಗಳು ಆತ ಬಾಲಿ ರೆಸಾರ್ಟ್ ಗೆ ಬರುವ ವಿಚಾರ ತಿಳಿಯುತ್ತಿದ್ದಂತೆಯೇ ಇಂಡೋನೇಷ್ಯಾ  ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆ ಮೂಲಕ ಭೂಗತ ಲೋಕದ ಓರ್ವ ಪಾತಕಿ ಬಂಧನಕ್ಕೀಡಾಗಿದ್ದಾನೆ.

ರಾಜನ್ ನನ್ನು ಭಾರತಕ್ಕೆ ರವಾನಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಭಾರತೀಯ ಗುಪ್ತಚರ ಅಧಿಕಾರಿಗಳು ಇಂಡೋನೇಷ್ಯಾಕ್ಕೆ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com