
ತಿರುವನಂತರಪುರ: ಕೇರಳದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬಾರ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಹಣಕಾಸು ಸಚಿವ ಕೆ.ಎಂ.ಮಾಣಿ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯವು ಗುರುವಾರ ಅಧಿಕಾರಿಗಳಿಗೆ ಆದೇಶಿಸಿದೆ.
ಕೇರಳ ರಾಜ್ಯದಲ್ಲಿ ಹಂತಹಂತವಾಗಿ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸುವ ಕ್ರಮವಾಗಿ ಮೊದಲ ಹಂತದಲ್ಲಿ ಮುಚ್ಚಲಾಗಿರುವ 418 ಬಾರ್ ಗಳ ಲೈಸೆನ್ಸ್ ಗಳನ್ನು ನವೀಕರಿಸಲು ಬಾರ್ ಮಾಲೀಕರಿಂದ ಹಣಕಾಸು ಸಚಿವರಾದ ಕೆ.ಎ.ಮಾಣಿ ಅವರು ರುಪಾಯಿ 1 ಕೋಟಿ ಲಂಚ ಪಡೆದಿದ್ದಾರೆಂಬ ಆರೋಪಗಳು ಕೇಳಿಬಂದಿತ್ತು.
ಬಾರ್ ಮಾಲೀಕರ ಸಂಘದ ಅಧ್ಯಕ್ಷ ಬಿಜು ರಮೇಶ್ ಅವರು ಕೆ.ಎಂ.ಮಾಣಿ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು. ಬಾರ್ ಲೆಸೆನ್ಸ್ ಗಳನ್ನು ನವೀಕರಿಸಲು ಮಾಣಿ ಅವರು 1 ಕೋಟಿ ರುಪಾಯಿ ಲಂಚ ಕೇಳಿದ್ದಾರೆ ಮತ್ತು ಈ ಹಣವನ್ನು ಮೂರು ಕಂತಿನಲ್ಲಿ ಪಾವತಿ ಮಾಡುವಂತೆ ತಿಳಿಸಿದ್ದಾರೆಂದು ಆರೋಪ ಮಾಡಿದ್ದರು. ಈ ಪ್ರಕರಣ ಕೇರಳದಾದ್ಯಂತ ಸಾಕಷ್ಟು ಕೋಲಾಹಲವನ್ನೆಬ್ಬಿಸಿತ್ತು.
ವಿಪಕ್ಷಗಳ ಒತ್ತಡಕ್ಕೆ ಮಣಿದು ಅಲ್ಲಿನ ಸರ್ಕಾರ ಮಾಣಿ ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಒಪ್ಪಿಸಿತ್ತು. ತನಿಖೆ ನಡೆಸಿದ ವಿಜಿಲೆನ್ಸ್ ಅಧಿಕಾರಿಗಳು ಮಾಣಿ ಅವರು ಲಂಚ ಸ್ವೀಕರಿಸಿರುವುದಕ್ಕೆ ಮತ್ತು ಲಂಚ ಕೇಳಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಪುರಾವೆಗಳನ್ನು ಹಾಜರುಪಡಿಸಲು ಬಾರ್ ಮಾಲೀಕರು ವಿಫಲರಾಗಿದ್ದಾರೆಂದು ಹೇಳಿದ್ದ ಅಧಿಕಾರಿಗಳು ಮಾಣಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಪ್ರಕರಣವನ್ನು ಮುಚ್ಚಿಹಾಕುವುದಾಗಿ ಹೇಳಿತ್ತು.
ಇದನ್ನು ವಿರೋಧಿಸಿದ್ದ ವಿರೋಧ ಪಕ್ಷವಾ ಸಿಪಿಎಂ ಪಕ್ಷ ಮಾಣಿಯವರ ರಾಜೀನಾಮೆಯನ್ನು ಆಗ್ರಹಿಸಿತ್ತಲ್ಲದೇ, ಕ್ಲೀನ್ ಚಿಟ್ ನೀಡುವಂತೆ ಹಾಗೂ ಪ್ರಕರಣವನ್ನು ಮುಚ್ಚಿಹಾಕುವಂತೆ ಮಾಣಿಯವರು ಅಧಿಕಾರಿಗೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದರು. ಹೀಗಾಗಿ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಮಾಣಿ ವಿರುದ್ಧ ತನಿಖೆಗೆ ಆದೇಶಿಸಿದೆ.
Advertisement