ಕೇರಳ ಕರಿ ವಿವಾದ: ವಿಷಾದ ವ್ಯಕ್ತಪಡಿಸಲು ಕೇಂದ್ರ ಸಿದ್ಧವೆಂದ ರಾಜನಾಥ ಸಿಂಗ್

ದೇಶದಾದ್ಯಂತ ಸಾಕಷ್ಟು ವಿವಾದ ಸೃಷ್ಟಿಸಿದ್ದ ದೆಹಲಿಯ ಕೇರಳ ಹೌಸ್ ಕ್ಯಾಂಟೀನ್ ನ ಗೋಮಾಂಸಾಹಾರ ಪ್ರಕರಣ ಸಂಬಂಧ ಈ ವರೆಗೂ ತಮ್ಮ ಮೌನವನ್ನು ಮುಂದುವರೆಸಿಕೊಂಡು ಬಂದಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ತಮ್ಮ ಮೌನವನ್ನು ಮುರಿದಿದ್ದು...
ಗೃಹ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)
ಗೃಹ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ದೇಶದಾದ್ಯಂತ ಸಾಕಷ್ಟು ವಿವಾದ ಸೃಷ್ಟಿಸಿದ್ದ ದೆಹಲಿಯ ಕೇರಳ ಹೌಸ್ ಕ್ಯಾಂಟೀನ್ ನ ಗೋಮಾಂಸಾಹಾರ ಪ್ರಕರಣ ಸಂಬಂಧ ಈ ವರೆಗೂ ತಮ್ಮ ಮೌನವನ್ನು ಮುಂದುವರೆಸಿಕೊಂಡು ಬಂದಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ತಮ್ಮ ಮೌನವನ್ನು ಮುರಿದಿದ್ದು, ಪ್ರಕರಣ ಸಂಬಂಧ ವಿಷಾದ ವ್ಯಕ್ತಪಡಿಸಲು ಕೇಂದ್ರ ಸಿದ್ಧವಿದೆ ಎಂದು ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪ್ರಕರಣ ಸಂಬಂಧ ತಪ್ಪು ಮಾಹಿತಿಯೊಂದಿಗೆ ಠಾಣೆಗೆ ಕರೆ ಮಾಡಿದ್ದ ಹಿಂದೂ ಸೇನಾ ನಾಯಕ ವಿಷ್ಣು ಗುಪ್ತಾ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಈಗಾಗಲೇ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಈ ರೀತಿಯ ಪ್ರಕರಣಗಳು ನಡೆದಾಗ ಸಾಕಷ್ಟು ಜಾಗೃತಿಯಿಂದ ನೋಡಿಕೊಳ್ಳುವಂತೆ ತಿಳಿಸಲಾಗಿದೆ. ಪ್ರಕರಣ ಸಂಬಂಧ ವಿಷಾದ ವ್ಯಕ್ತಪಡಿಸಲು ಸಿದ್ಧನಿದ್ದೇನೆ. ಬಿಹಾರ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಾಹಿತಿಗಳ ಹತ್ಯೆ ಖಂಡಿಸಿ ಸಾಹಿತಿಗಳು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತಿರುವುದರ ವಿರುದ್ಧ ಕಿಡಿಕಾಡಿರುವ ಅವರು, ಇದೊಂದು ನಿಜಕ್ಕೂ ರಾಜಕೀಯ ಪಿತೂರಿಯಾಗಿದೆ. ಸಾಹಿತಿಗಳ ಗೌರವಕ್ಕಾಗಿ ನೀಡಿದ ಪ್ರಶಸ್ತಿಗಳನ್ನು ಮತ್ತೆ ಸರ್ಕಾರಕ್ಕೆ ಹಿಂತಿರುಗಿ ನೀಡುವುದೊಂದು ದೇಶಕ್ಕೆ ಅವಮಾನ ಮಾಡಿದಂತೆಯೇ ಹೊರತು ಅಧಿಕಾರದಲ್ಲಿರುವ ಸರ್ಕಾರಕ್ಕೆ ಅವಮಾನ ಮಾಡಿದಂತಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಕಷ್ಟು ಗಲಭೆಗಳು ನಡೆದವು. ಅಂದು ಸಾಕಷ್ಟು ಜನರು ಸಾವನ್ನಪ್ಪಿದ್ದರು. ಆಗೇಕೆ ಇವರು ಮೌನದಿಂದ್ದರು ಎಂದು ಪ್ರಶ್ನಿಸಿದ್ದಾರೆ.

ದಾದ್ರಿ ಪ್ರಕರಣ ಹಾಗೂ ಕಲ್ಬುರ್ಗಿ ಹತ್ಯೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಸಮಸ್ಯೆಗಳಲ್ಲಿ ಕೇಂದ್ರ ಮೂಗು ತೂರಿಸುವುದಿಲ್ಲ. ವಿರೋಧ ಪಕ್ಷಗಳು ನಮ್ಮ ವಿರುದ್ಧ ಪಿತೂರಿ ರೂಪಿಸಬೇಕಾದ್ದರೆ, ಅಥವಾ ದೂಷಣೆ ಮಾಡಬೇಕಿದ್ದರೆ ನನ್ನನ್ನು ಗುರಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರ ಸಮಸ್ಯೆಗಳಿಗೆ ಪ್ರಧಾನಿಯವರನ್ನೇಕೆ ಏಳೆಯಬೇಕು. ರಾಜ್ಯ ಸರ್ಕಾರದ ಸಮಸ್ಯೆಗಳಲ್ಲಿ ಪ್ರಧಾನಿಯವರು ಏನನ್ನು ಮಾಡಲು ಸಾಧ್ಯ? ವಿರೋಧ ಪಕ್ಷಗಳ ಈ ನಡವಳಿಕೆ ನಿಜಕ್ಕೂ ಸರಿಯಾದುದಲ್ಲ. ವಿರೋಧಪಕ್ಷಗಳು ಮೋದಿಯವರನ್ನು ಸುಖಾಸುಮ್ಮನೆ ಪ್ರಕರಣಗಳಲ್ಲಿ ಸಂಬಂಧಿಸಲು ಪ್ರಯತ್ನ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com