ಶ್ರೀನಗರ: ಕಾಶ್ಮೀರ ಸಮಸ್ಯೆ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆಯದೇ ಇರುವುದು ವಿನಾಶಕಾರಿ ಬೆಳವಣಿಗೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.
ಉಭಯ ದೇಶಗಳು ಕಾಶ್ಮೀರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದೇ ರೀತಿ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳದೇ ಇದ್ದರೆ, ಅಪಾಯ ಮಾತ್ರ ಖಂಡಿತ ಎಂದು ಅವರು ಹೇಳಿದ್ದಾರೆ.
ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದನ್ನು ಉಭಯ ದೇಶಗಳು ಮೊದಲು ನಿಲ್ಲಿಸಬೇಕು. ಇದೇ ರೀತಿ ಹೇಳಿಕೆಗಳನ್ನು ನೀಡುತ್ತಾ ಹೋದರೆ, ಸಮಸ್ಯೆ ಬಗೆ ಹರಿಯುವದಕ್ಕಿಂತ ಹೆಚ್ಚಾಗಿ, ಸಂಬಂಧ ಹಾಳು ಮಾಡುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ದೊಡ್ಡ ದೇಶ, ನಿಮ್ಮದು ಚಿಕ್ಕ ದೇಶ ಎಂದು ಪರಿಗಣಿಸದೇ, ಭಾರತ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಒಟ್ಟಾಗಿ ಸೇರಿ ಭಯೋತ್ಪಾದನೆ ವಿರುದ್ಧ ಹೋರಾಡಿ ಎಂದ ಅವರು, ಕಾಶ್ಮೀರ ಸಮಸ್ಯೆ ಕುರಿತು ಉಭಯ ದೇಶಗಳು ಮಾತುಕತೆ ನಡೆಸಿ ಎಂದು ಸಲಹೆ ನೀಡಿದ್ದಾರೆ.