

ಜೈಪುರ: ಲೋಕಾಸೇವಾ ಪರೀಕ್ಷೆ ಬರೆಯುವ ಯುವತಿಯರು ಕಡ್ಡಾಯವಾಗಿ ಸಲ್ವಾರ್ ಅಥವಾ ಸೀರೆಯನ್ನು ಮಾತ್ರ ಧರಿಸಬೇಕು. ಬೇರಾವುದೇ ಉಡುಪುಗಳನ್ನು ಧರಿಸಿದರೂ ಪರೀಕ್ಷೆಗೆ ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ರಾಜಸ್ಥಾನ ಲೋಕಸೇವಾ ಆಯೋಗ (ಆರ್ಪಿಎಸ್ಸಿ) ಆದೇಶವೊಂದನ್ನು ಶನಿವಾರ ಹೊರಡಿಸಿದೆ
ಲೋಕಸೇವಾ ಆಯೋಗವು ಕೇವಲ ಯುವತಿಯರಿಗಷ್ಟೇ ಅಲ್ಲದೆ, ಯುವಕರಿಗೂ ಡ್ರೆಸ್ ಕೋಡ್ ಸಿದ್ಧಪಡಿಸಿದ್ದು, ಪರೀಕ್ಷೆ ಬರೆಯುವ ಯುವಕರು ಅರ್ಧ ತೋಳಿನ ಶರ್ಟ್ ಹಾಗೂ ಶೂ ಮತ್ತು ಸಾಕ್ಸ್ ಹಾಕದೆ ಕಾಲಿಗೆ ಪಾದರಕ್ಷೆ ಹಾಕಿಕೊಂಡರೆ ಮಾತ್ರ ಪ್ರವೇಶ. ಒಂದು ವೇಳೆ ಅಭ್ಯರ್ಥಿಗಳು ನಿಯಮಗಳನ್ನು ಪಾಲಿಸಿದಿದ್ದರೆ ಪರೀಕ್ಷಾ ಕೊಠಡಿಯೊಳಗಿನ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ಎಚ್ಚರಿಸಿದೆ.
ಪರೀಕ್ಷೆಯಲ್ಲಿ ನಡೆಯುವ ನಕಲನ್ನು ತಡೆಯುವ ಸಲುವಾಗಿ ಲೋಕ ಸೇವಾ ಆಯೋಗವು ಈ ರೀತಿಯ ಕ್ರಮಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ರಾಜಸ್ಥಾನ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಗಾಗಿ ಈಗಾಗಲೇ ಸುಮಾರು 4.7 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗಾಗಿ ಅಲ್ಲಿನ ಸರ್ಕಾರವು 1,232 ಪರೀಕ್ಷಾ ಕೊಠಡಿಗಳನ್ನು ಸಿದ್ಧಗೊಳಿಸಿದೆ. ಅಲ್ಲದೆ ಪರೀಕ್ಷೆಗಾಗಿ 17 ಸಾವಿರ ಮೇಲ್ವಿಚಾರಕರನ್ನು ನೇಮಿಸಿದ್ದು, 200 ತನಿಖಾಧಿಕಾರಿಗಳನ್ನು ನೇಮಿಸಿದೆ. ಪರೀಕ್ಷೆಗೆ ಯಾವುದೇ ತೊಡಕಾಗದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ಭದ್ರತೆಗಾಗಿ 7 ಸಾವಿರ ಪೊಲೀಸರನ್ನು ನೇಮಿಸಿ ಎಂದು ತಿಳಿದುಬಂದಿದೆ.