
ಪಾಟ್ನಾ: ಬಿಹಾರ ವಿಧಾನಸಭೆಗಾಗಿ ನಡೆದ ಚುನಾವಣೆಯ ನಾಲ್ಕನೇ ಹಂತದ ಮತದಾನ ಆಂತ್ಯವಾಗಿದ್ದು, ಒಟ್ಟಾರೆ ಶೇ.57.59ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ನಕ್ಸಲರ ದಾಳಿ ಬೆದರಿಕೆಯ ನಡುವೆಯಲ್ಲಿಯೇ ಆರಂಭವಾದ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಯಾಗೊಂಡಿದ್ದು, ಒಟ್ಟು 55 ಕ್ಷೇತ್ರಗಳಲ್ಲಿ ಶೇ.57.59ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಗಾಗಿ 14, 139 ಮತಗಟ್ಟೆ ಸ್ಥಾಪಿಸಲಾಗಿತ್ತು. ಚುನಾವಣೆಯಲ್ಲಿ 57 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 776 ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆ ಸೇರಿದೆ.
ಕಳೆದ 2010ರಲ್ಲಿ 55 ಸೀಟುಗಳ ಪೈಕಿ ಬಿಜೆಪಿ ಪಕ್ಷವು 26 ಸ್ಥಾನಗಳನ್ನು ಗೆದ್ದಿತ್ತು. ಜೆಡಿಯು 24 ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಇದರಂತೆ ಆರ್‌ಜೆಡಿ 2 ಸೀಟು ಮತ್ತು ಪಕ್ಷೇತರರು ಒಂದು ಸ್ಥಾನ ಗಳಿಸಿದ್ದರು. ಆದರೆ, ಈ ಬಾರಿ ಮಹಾಮೈತ್ರಿಕೂಟದಿಂದ ಆರ್‌ಜೆಡಿ 26 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೆಡಿಯು 21 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಈ ಹಿಂದೆ 131 ಕ್ಷೇತ್ರಗಳಲ್ಲಿ ಮೂರು ಸುತ್ತಿನ ಮತದಾನ ನಡೆದಿದ್ದು, ಇದೀಗ ನಾಲ್ಕನೇ ಹಂತದ ಮತದಾನ ಕೂಡ ಮುಕ್ತಾಯವಾದ್ದರಿಂದ ಒಟ್ಟು 186 ಸ್ಥಾನಗಳಿಗೆ ಮತದಾನವಾದಂತಾಗಿದೆ. ಇನ್ನುಳಿದ 5ನೇ ಹಂತದ ಮತದಾನ ಪ್ರಕ್ರಿಯೆಯು ಇದೇ ನವೆಂಬರ್ 5 ರಂದು ನಡೆಯಲಿದ್ದು, 57 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿವೆ. ನ.8ರಂದು ಮತಎಣಿಕೆ ನಡೆಯಲಿದ್ದು, ಪಕ್ಷಗಳ ಹಣೆಬರಹ ನಿರ್ಧಾರವಾಗಲಿದೆ.
Advertisement