ಕೇರಳ, ಬಂಗಾಳದಲ್ಲಿ ಬಂದ್ ಯಶಸ್ವಿ; ಉಳಿದೆಡೆ ಭಾಗಶಃ; ಜನಜೀವನ ಅಸ್ತವ್ಯಸ್ತ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಬಹುತೇಕ ಯಶಸ್ವಿಯಾಗಿದೆ.
ಭಾರತ್ ಬಂದ್ ವೇಳೆ ಬಣಗುಡುತ್ತಿದ್ದ ಮೆಜಸ್ಟಿಕ್ ಬಸ್ ನಿಲ್ದಾಣ
ಭಾರತ್ ಬಂದ್ ವೇಳೆ ಬಣಗುಡುತ್ತಿದ್ದ ಮೆಜಸ್ಟಿಕ್ ಬಸ್ ನಿಲ್ದಾಣ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಂದ್ ಬಹುತೇಕ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಳ ಕೇರಳದಲ್ಲಿ ಬಂದ್ ಗೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಕರ್ನಾಟಕದಲ್ಲೂ ಬಂದ್ ಆಚರಣೆ ಯಶಸ್ವಿಯಾಗಿದೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಬ್ಯಾಂಕ್, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿತ್ತಾದರೂ ನಿರೀಕ್ಷಿತ ಮಟ್ಟದ ಪ್ರತಿಕೆಯ ದೊರೆತಿಲ್ಲ.

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು. ಸಂಜೆ 6 ಗಂಟೆ ವೇಳೆಗೆ ಬಸ್ ಸಂಚಾರ ಪುನಾರಂಭಗೊಂಡಿದೆ. ದೇಶವ್ಯಾಪಿ ನಡೆದ ಬಂದ್ ನಲ್ಲಿ ಅಂದಾಜು 150 ಮಿಲ್ಲಿಯನ್ ಕಾರ್ಮಿಕರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ಕಾರ್ಮಿಕ ಸುಧಾರಣೆಗಳ ವಿರುದ್ಧ ಕರೆ ನೀಡಿದ್ದ ಭಾರತ ಬಂದ್ ಯಶಸ್ವಿಯಾಗಿರುವುದು ಕಾರ್ಮಿಕರ ಸಲಹೆ ಪಡೆದು ಸುಧಾರಣೆಗಳನ್ನು ಜಾರಿಗೊಳಿಸಬೇಕೆಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ತಲುಪಿಸಿದೆ ಎಂದು ಸರ್ಕಾರಿ ಉದ್ಯೋಗಿಗಳು  ಬಂದ್ ಯಶಸ್ವಿಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ನಡೆದಿದ್ದ ಯಾವುದೇ ಬಂದ್ ಗೆ ಈ ಮಟ್ಟದ ಪ್ರತಿಕ್ರಿಯೆ ದೊರೆತಿರಲಿಲ್ಲ ದೇಶಾದ್ಯಂತ ಸುಮಾರು 150 ಮಿಲಿಯನ್ ಕಾರ್ಮಿಕರು ಸ್ವಯಂಪ್ರೇರಿತರಾಗಿ ಬಂದ್ ನಲ್ಲಿ ಭಾಗವಹಿಸಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಾರ್ಯದರ್ಶಿ ಗುರುದಾಸ್ ದಾಸ್ ಗುಪ್ತಾ ಹೇಳಿದ್ದಾರೆ. ಪಿಟಿಐ ವರದಿ ಪ್ರಕಾರ ಬಂದ್ ವೇಳೆ 200 ಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಬಂಧಿಸಲಾಗಿದೆ.

ಭಾರತ್ ಬಂದ್ ನಿಂದ ಸುಮಾರು 3 .7 ಬಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗಿದೆ ಎಂದು ಉದ್ಯಮ ಸಂಸ್ಥೆ ಅಸ್ಸೋಛಾಮ್ ಅಂದಾಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com