ಬಿಹಾರ "ಮಹಾಮೈತ್ರಿ"ಯಿಂದ ಮುಲಾಯಂ ಔಟ್

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇತೃತ್ವದ "ಮಹಾಮೈತ್ರಿ" ಕೂಟದಿಂದ ಸಮಾಜವಾದಿ ಪಕ್ಷ ಹೊರಬಂದಿದ್ದು..
ಮುಲಾಯಂ ಸಿಂಗ್ ಯಾದವ್ ಮತ್ತು ಸಿಎಂ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)
ಮುಲಾಯಂ ಸಿಂಗ್ ಯಾದವ್ ಮತ್ತು ಸಿಎಂ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)

ಪಾಟ್ನಾ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇತೃತ್ವದ "ಮಹಾಮೈತ್ರಿ" ಕೂಟದಿಂದ  ಸಮಾಜವಾದಿ ಪಕ್ಷ ಹೊರಬಂದಿದ್ದು, ಬಿಹಾರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಗುರುವಾರ ಘೋಷಣೆ ಮಾಡಿದೆ.

ಸ್ವತಃ ಈ ವಿಚಾರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಘೋಷಣೆ ಮಾಡಿದ್ದು, ಬಿಹಾರ ವಿಧಾನಸಭಾ ಚುನಾವಣೆಯನ್ನು ತಮ್ಮ ಪಕ್ಷ ಏಕಾಂಗಿಯಾಗಿ  ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಮುಲಾಯಂ ಸಿಂಗ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಈ ದಿಢೀರ್ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಪ್ರಧಾನಿ  ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಎದುರಿಸಲು ಛಿದ್ರಗೊಂಡಿದ್ದ ಜನತಾಪರಿವಾರವನ್ನು ಒಟ್ಟುಗೂಡಿಸಲಾಗಿತ್ತು.

ಮಾಜಿ ಪ್ರಧಾನಿ ಮತ್ತು ಜಾತ್ಯಾತೀತ ಜನತಾದಳ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ, ಜೆಡಿಯು ಮುಖ್ಯಸ್ಥ ಶರದ್ ಯಾದವ್, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು  ಸಮಾಜವಾದಿ ಪಕ್ಷ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವೇ ಸೇರಿದಂತೆ ಪ್ರಮುಖ ಮುಖಂಡರು ಜನತಾ ಪರಿವಾರ ಮಹಾ ಮೈತ್ರಿಕೂಟಕ್ಕೆ ಮರು ಚಾಲನೆ ನೀಡಿದ್ದರು. ಬಿಹಾರ ಚುನಾವಣೆ  ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಮುಲಾಯಂ ಸಿಂಗ್ ಯಾದವ್ ಮತ್ತು ಮಹಾಮೈತ್ರಿ ಕೂಟದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾಯಿತು  ಎನ್ನಲಾಗುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮುಲಾಯಂ ಸಿಂಗ್ ಯಾದವ್ ಅವರು ಬಳಿಕ ಸೋನಿಯಾ ಗಾಂಧಿ ಅವರು ಹಾಜರಿದ್ದ ಬಿಹಾರದ  ಪಾಟ್ನಾದಲ್ಲಿ ನಡೆದ ಮಹಾ ಮೈತ್ರಿಕೂಟದ ಬೃಹತ್ ರ್ಯಾಲಿಗೆ ಗೈರು ಹಾಜರಾಗಿದ್ದರು.

ಈ ಹಿನ್ನಲೆಯಲ್ಲಿ ಮುಲಾಯಂ ಮಹಾಮೈತ್ರಿಕೂಟದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಕುರಿತು ಹಲವು ಊಹಾಪೋಹಗಳು ರಾಜಕೀಯ ವಲಯದಲ್ಲಿ ಸುಳಿದಾಡುತ್ತಿತ್ತು. ಇದೀಗ ಈ  ಊಹಾಪೋಹಗಳಿಗೆ ಅಧಿಕೃತ ತೆರೆ ಬಿದ್ದಿದ್ದು, ಸ್ವತಃ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ತಾವು ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com