
ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನಗಿರಿ ದತ್ತಪೀಠದ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಧಾರ್ಮಿಕ ಆಚರಣೆ ಹೇಗಿರಬೇಕೆಂಬುದೂ ಸೇರಿದಂತೆ ವಿವಿಧ ಅಂಶಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕೋರ್ಟ್ ಕರ್ನಾಟಕ ಸರ್ಕಾರದ ಹೆಗಲಿಗೆ ಹೊರಿಸಿದೆ.
ವಿವಾದಿತ ಸ್ಥಳದಲ್ಲಿ ಉಭಯ ಧರ್ಮಗಳ ಪ್ರತಿನಿಧಿಗಳಿಗೆ ಯಾವ ಯಾವ ಆಚರಣೆಗೆ ಅವಕಾಶ ನೀಡಬೇಕು ಎಂಬುದನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ ನಿರ್ಧರಿಸುವಂತೆಯೂ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಮುನ್ನ ಉಭಯ ಧರ್ಮಗಳ ಪ್ರತಿನಿಧಿಗಳ ಅಭಿಪ್ರಾಯ ಮತ್ತು ಆಕ್ಷೇಪ ಆಲಿಸಬೇಕು ಎಂದು ಸೂಚಿಸಿದೆ.
ರಾಜ್ಯ ಸರ್ಕಾರ ಪ್ರಕರಣ ಇತ್ಯರ್ಥ ಪಡಿಸುವರೆಗೂ 1989ರಲ್ಲಿ ನೀಡಿರುವ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಯೂ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಸಿಟಿಜನ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್ ಸಂಘಟನೆ ಮತ್ತು ಸಯ್ಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ರಂಜನ್ ಗೊಗೊಯ್ ಮತ್ತು ನ್ಯಾ.ಎನ್.ವಿ.ರಮಣ ಅವರಿದ್ದ ನ್ಯಾಯ ಪೀಠ, ``ಒಂದು ವೇಳೆ ಯಾವುದೇ ಧರ್ಮದ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರದ ತೀರ್ಮಾನ ಒಪ್ಪಿಗೆ ಯಾಗದೇ ಇದ್ದರೆ, ನ್ಯಾಯಾಲಯದ ಮೆಟ್ಟಿಲು ಏರಲು ಮುಕ್ತರಾಗಿರುತ್ತಾರೆ'' ಎಂದು ಸ್ಪಷ್ಟಪಡಿಸಿದೆ.
ಬಾಬಾ ಬುಡನಗಿರಿಯಲ್ಲಿ ಹಿಂದೂ ಮತ್ತು ಮುಸ್ಲಿಮರ ಯಾವ ಆಚಾರಗಳಿಗೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಧಾರ್ಮಿಕ ಇಲಾಖೆಯ ಆಯುಕ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೂಲಕ ಸುಪ್ರೀಂಕೋರ್ಟ್‍ಗೆ ವರದಿ ಸಲ್ಲಿಸಿ ದ್ದರು. ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುವ ಮುನ್ನ ವರದಿ ಪರಿಶೀಲಿಸಿ, ಉಭಯ ಧರ್ಮಗಳ ಪ್ರತಿನಿಧಿಗಳ ಅಭಿಪ್ರಾಯ ಕೇಳಿ ರಾಜ್ಯ ಸಂಪುಟ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ಮಾಡಿದೆ.
ವಿವಾದಿತ ಪ್ರದೇಶದಲ್ಲಿನ ಧಾರ್ಮಿಕ ಆಚರಣೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಿಟಿಜನ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ಸಂಘಟನೆ 2008ರಲ್ಲಿ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಜನಾಭಿಪ್ರಾಯ ಸಂಗ್ರಹಕ್ಕೆ ತಡೆ ನೀಡಬೇಕೆಂಬ ಅರ್ಜಿದಾರರ ಬೇಡಿಕೆ ತಿರಸ್ಕರಿಸಿತ್ತು.
ನಂತರ ಜಿಲ್ಲಾಧಿಕಾರಿಗಳು ಅಭಿಪ್ರಾಯ ಸಂಗ್ರಹಿಸಿ ಸುಪ್ರೀಂಕೋರ್ಟ್‍ಗೆ 2010ರಲ್ಲಿ ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದರು. ಕರ್ನಾಟಕ ಪರ ವಕೀಲರು ಇದು ಅತ್ಯಂತ ಸೂಕ್ಷ್ಮವಿಚಾರವಾದ್ದರಿಂದ ರಾಜ್ಯ ಸಚಿವ ಸಂಪುಟವೇ ತನ್ನ ನಿರ್ಧಾರ ಪ್ರಕಟಿಸಲಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರು ಇದಕ್ಕೆ ಆಕ್ಷೇಪಿಸಿದರೂ ನ್ಯಾಯಪೀಠ ರಾಜ್ಯ ಸರ್ಕಾರದ ಪರ ವಕೀಲರ ಮನವಿಯನ್ನು ಪುರಸ್ಕರಿಸಿತು. ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ವಿವಾದಿತ ಸ್ಥಳವು ಹಿಂದೂ-ಮುಸ್ಲಿಮರ ಸೌಹಾರ್ದತೆಯ ಸಂಕೇತ. ಆದ್ದರಿಂದ ಗುಹೆಯಲ್ಲಿ ನಿತ್ಯ ಪೂಜೆಗೆ ಅರ್ಚಕರ ನೇಮಕ ಮಾಡಬೇಕು. ಜತೆಗೆ ಶಾಖಾದ್ರಿಯವರ ನೇತೃತ್ವದಲ್ಲಿ ಉರುಸ್ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ.
Advertisement