

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮುಂಬೈ ಪೊಲೀಸರು, ಶೀನಾ ಕೊಲೆಗೆ ಬಳಸಲಾಗಿದ್ದ ಕಾರನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆಯಷ್ಟೇ, ಇಂದ್ರಾಣಿ, ಪೀಟರ್ ಮುಖರ್ಜಿ ಮತ್ತು ಸಂಜೀವ್ ಖನ್ನಾ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಇಂದ್ರಾಣಿಯ ಮತ್ತೊಬ್ಬಳು ಪುತ್ರಿಯಾದ ವಿಧಿಯನ್ನು ಖಾರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. ಗುರುವಾರ ಮುಂಬೈ ಪೊಲೀಸರು ಇಂದ್ರಾಣಿ ಶೀನಾ ಬೋರಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು.
ಇನ್ನು, ಸ್ಟಾರ್‍ನ ಮಾಜಿ ಸಿಇಒ ಪೀಟರ್ ಮುಖರ್ಜಿ ಬ್ರಿಟನ್ ಮತ್ತು ಸ್ಪೇನ್‍ನಲ್ಲಿ ಹೊಂದಿರುವ ಉದ್ದಿಮೆಗಳು, ಅವುಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದೇ ವೇಳೆ ಸತತ ಮೂರನೇ ದಿನವಾದ ಶುಕ್ರವಾರ ಕೂಡ ಮುಖರ್ಜಿ ವಿಚಾರಣೆ ನಡೆಯಿತು. ಜತೆಗೆ ಇಂದ್ರಾಣಿಯ ಮೊದಲ ಪತಿ ಹಾಗೂ ಶೀನಾ ತಂದೆ ಸಿದ್ಧಾರ್ಥ್ ದಾಸ್‍ರನ್ನು 2ನೇ ದಿನವೂ ವಿಚಾರಣೆ ನಡೆಸಿದ ಪೊಲೀಸರು ಅವರ ಡಿಎನ್‍ಎ ಪರೀಕ್ಷೆಗಾಗಿ ರಕ್ತದ ಮಾದರಿ ಪಡೆದಿದ್ದಾರೆ.